ಮುಗಿದಿತ್ತು ಈ ಸಂಜೆ
ಮಾತೇ ಇಲ್ಲದ ಹಾಗೆ
ಮತ್ತೆ ಮಳೆ ಬರುವಂತ
ಮೋಡದೊಳಗೆ
ಮೆಲುದನಿಯ ರಾಗದಲಿ
ಮಿಡಿವ ವೀಣೆಯು ಕೂಡ
ಮೂಕ ಮೌನದೊಳಿತ್ತು
ಮುಸುಕಿನೊಳಗೆ
ಮಲ್ಲಿಗೆಯು ಹಂಬಿತ್ತು
ಮನೆ ಮೇಲೆ ಮಾಡಿನಲಿ
ಮುಗುಳರಳಿ ಘಮಿಸಿತ್ತು
ಮನೆಯ ಒಳಗೆ
ಮಿನುಕು ಹುಳ ಮಿನುಗಿತ್ತು
ಮಾಮರದಿ ಹೂವಿತ್ತು
ಮುಸ್ಸಂಜೆ ಹೊತ್ತಲ್ಲಿ
ಮೌನವಿತ್ತು
ಮುಡಿಸಿರುವ ದೀಪದಲಿ
ಮಂದ ಬೆಳಕಿನ ಮೌನ
ಮತ್ತೆಂದು ಬರುವೆಯೊ
ಮರಳಿ ನೀನು
ಮನೆ ತುಂಬ ದೀಪವ
ಮುಡಿಸಿ ನಗುವೆನು ನಾನು
ಮರಳಿ ಬಾ ಹೊರಳಿ ಬಾ
ಮತ್ತೆ ನೀನು
ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)
No comments:
Post a Comment
Note: only a member of this blog may post a comment.