Friday, 19 November 2021

ದೇವ ದೀಪಾವಳಿ

ಕಾರ್ತಿಕ ಪೌರ್ಣಮಿಯನ್ನು 'ದೇವ ದೀಪಾವಳಿ' ಎಂದು ಕರೆಯಲಾಗುತ್ತದೆ. ಚಾತುರ್ಮಾಸದ ಆರಂಭದಲ್ಲಿ ಬರುವ ಶಯನ ಏಕಾದಶಿಯಲ್ಲಿ ನಿದ್ರೆಗೆ ಜಾರುವ ಮಹಾವಿಷ್ಣು ಚಾತುರ್ಮಾಸದ ಅಂತ್ಯವಾಗುವ ಕಾರ್ತಿಕ ಮಾಸದ ಪ್ರಬೊಧಿನಿ ಏಕಾದಶಿಗೆ ಏಳುತ್ತಾನೆ ಎಂಬ ಪ್ರತೀತಿ ಇದೆ. ಈ ನಾಲ್ಕು ಮಾಸಗಳು ಹೆಚ್ಚು ಮಳೆ ಬೀಳುವ ಅವಧಿ ಆದ್ದರಿಂದ ಮತ್ತು ಸಾಲು ಹಬ್ಬಗಳು ಬರುವುದರಿಂದ ಈ ಸಮಯದಲ್ಲಿ ಮದುವೆ ಇನ್ನಿತರ ವಿಷೇಶ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾಗಿ ಇದು ವಿಷ್ಣುವಿನ ಶಯನ ಸಮಯ ಎಂದು ಉಲ್ಲೇಖಿಸಲಾಗಿದೆ. 

ಯತಿಯಾದವನು ಒಂದು ಪ್ರದೇಶದಲ್ಲಿ ಎರಡು ದಿನಕ್ಕಿಂತ ಹೆಚ್ಚು ತಂಗುವ ಪದ್ಧತಿ ಇಲ್ಲ. ಆದರೆ, ಚಾತುರ್ಮಾಸದ ಅವಧಿಯಲ್ಲಿ ಮಾತ್ರ ಪರ್ಯಟನೆಗೆ ತೊಡಕಾಗುವ ಕಾರಣ ಯತಿಗಳು ಒಂದು ಕಡೆ ಇದ್ದು ಚಾತುರ್ಮಾಸ್ಯ ನೆರವೇರಿಸುತ್ತಾರೆ. 
ವರ್ಷವಿಡೀ ಭಕ್ತರ ಬಳಿ ತೆರಳುವ ಯತಿಗಳನ್ನು ಚಾತುರ್ಮಾಸದ ಅವಧಿಯಲ್ಲಿ ಭಕ್ತರೇ ಯತಿಗಳ ಬಳಿ ತೆರಳಿ ಗುರುದರ್ಶನ ಪಡೆಯುವುದು ವಾಡಿಕೆ. 
ಪ್ರಬೋಧಿನಿ ಏಕಾದಶಿಯ ಮರು ದಿನವೇ ತುಳಸಿ ವಿವಾಹವನ್ನು ನಡೆಸಲಾಗುತ್ತದೆ. ಯತಿಗಳು ತುಳಸಿ ವಿವಾಹ ಸಂಪನ್ನಗೊಳಿಸಿ ಚಾತುರ್ಮಾಸ ಕೊನೆಗೊಳಿಸಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ತುಳಸಿ ವಿವಾಹವು  ವದುವೆಗಳಿಗೆ ವಿದ್ಯುಕ್ತ ಚಾಲನೆಯೂ ಹೌದು. 

ಉತ್ಥಾನ ದ್ವಾದಶಿಯ ತುಳಸಿ ಪೂಜೆಯ ನಂತರ ಬರುವ ಹುಣ್ಣಿಮೆಯೇ ದೇವ ದೀಪಾವಳಿ. ಈ ದಿನ ದೇವತೆಗಳು ಗಂಗಾ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ ಎನ್ನುವ ನಂಬಿಕೆಯೂ ಇದೆ. ಈ ದಿನ ವರ್ಷದ ಲೆಕ್ಕದಲ್ಲಿ ಮುನ್ನೂರ ಅರವತ್ತೈದು ಬತ್ತಿ ಹೊಸೆದು ದೀಪ ಹಚ್ಚಿ ಆಲದ ಮರ, ನದಿ ತಟ, ತುಳಸಿಯ ಅಡಿಯಲ್ಲಿ ಇಡುವುದು ವಿಶೇಷ. 

ಆಲದ ಮರದಲ್ಲಿರುವ ಹಕ್ಕಿಗಳು, ನದಿಯಲ್ಲಿರುವ ಮೀನುಗಳು, ಸುತ್ತಲಿರುವ ಪಶು ಪಕ್ಷಿ, ಕೀಟಗಳೆಲ್ಲ ಕತ್ತಲ ನಡುವೆ ಹಚ್ಚಿದ ದೀಪದ ಬೆಳಕನ್ನು ಕಂಡು ಆತ್ಮೋನ್ನತಿ ಹೊಂದಲಿ ಎನ್ನುವ ಉದಾತ್ತ ಆಶಯ ಈ ದೀಪಜ್ವಲನದ ಹಿಂದಿದೆ. 

ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಪ್ರಕ್ರಿಯೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ತುಳುನಾಡಿನಾದ್ಯಂತ ನಡೆಯುವ ಲಕ್ಷ ದೀಪೋತ್ಸವವೂ ಇದರದ್ದೇ ಒಂದು ಬಗೆ. ರಾಮರಾಜ ಕ್ಷತ್ರಿಯ ಸಮುದಾಯದ ಜನರು ಇದೇ ದಿನ ಸೌತೆಕಾಯಿಯ ಒಳ ತಿರುಳನ್ನು ತೆಗೆದು ದೀಪದಂತೆ ಮಾಡಿ ಅದರಲ್ಲಿ ದೀಪ ಹಚ್ಚುವ ಪುರಾತನ ಪದ್ಧತಿಯೂ ಇದೆ. 

ಯೋಗೀಶ್ ಮಲ್ಲಿಗೆಮಾಡು

Tuesday, 16 November 2021

ಏನ ಮಾಡಲಿ ಹೇಳು

ಎಲ್ಲಿ ತನಕ ನಿನ್ನ ಜೊತೆಗೆ ಹೀಗೆ ನಡೆವುದೊ?
ಯಾವ ದಾರಿ ತಿರುವಿನಲ್ಲಿ ಕವಲು ಒಡೆವುದೊ?
ಬಿಗಿದ ಕೈಯ ಸಡಿಲಗೊಳಿಸಿ,
ಸಾಕು ಇನ್ನು ಎಂದು ಹೇಳಿ,
ಯಾವ ಘಳಿಗೆ, ಯಾವ ಹೊತ್ತು,
ಹೀಗೆ ನೀನು ಹೊರಟು ಬಿಡುವುದೊ?

ಹೊರಟ ಮೇಲೆ ಉಳಿವುದೇನು ನೋಡುತಿರುವುದೊ?
ಕಣ್ಣಿನಲ್ಲಿ ಉಳಿದ ನೋವ ಕೆಡವಿ ಬಿಡುವುದೊ?
ಬಾಳ ಬಯಲ ಪಯಣದಲ್ಲಿ,
ನಿನ್ನ ಜೊತೆಗೆ ನಡೆದ ನೆನಪ,
ಎದೆಯ ಒಳಗೆ ಜತನವಾಗಿ,
ಬಚ್ಚಿ ಇಡುವುದೊ?

ಉಳಿದ ನಾನು ದಾರಿ ನಡುವೆ ಕುಸಿದು ಬಿಡುವುದೊ?
ಮೇಲೆ ಏಳದಂತೆ ಹಾಗೆ ಇದ್ದು ಬಿಡುವುದೊ?
ನಿನ್ನ ದಾರಿ ಕಡೆಗೆ ಮತ್ತೆ,
ಸೋತ ದನಿಯ ಮೌನದಲ್ಲಿ,
ಗಂಟಲುಬ್ಬಿ ಕೈಯ ಬೀಸಿ,
ಮರಳಿ ಬಾ ಎನ್ನುತಿರುವುದೊ?

ಹೂವ ನಿನ್ನ ದಾರಿಗಿಷ್ಟು ಚೆಲ್ಲಿ ಬಿಡುವುದೊ?
ನಿನ್ನ ಪಯಣ ಸುಖವ ಹರಸಿ ಎದ್ದು ನಡೆವುದೊ?
ನಗುತ ನಾನು ದಾರಿ ಅರಸಿ,
ಗಟ್ಟಿ ಮನಸ ಮಾಡಿ ಹಾಡಿ,
ಉಳಿದ ದಾರಿ ಪಯಣವನ್ನು,
ಬಾಳೇ ಹೀಗೆ ಎಂದು ನಡೆಸುತಿರುವುದೊ?

Wednesday, 15 September 2021

ಒಂದು ಮೀನಿನ ಕಥೆ

ರಾತ್ರಿಯ ಊಟಕ್ಕೆಂದು ಮೊನಚಾದ ಕತ್ತಿಯ ಅಲಗಿಗೆ ಮೀನು ಹಿಡಿದು ಕೂತವಳು ಮೀನಿನ ಕಣ್ಣನ್ನೇ ದಿಟ್ಟಿಸುತ್ತಿದ್ದಳು. ಮೀನಿನ ಕಣ್ಣಿನೊಳಗೆ ಆಕೆಗೆ ಆಳ ಸಮುದ್ರದ ಅಲೆಗಳಬ್ಬರಕ್ಕೆ ಬಲೆ ಬೀಸುತ್ತಿರುವ ಅವಳ ಗಂಡನ ನೆನಪಾಯಿತು.
ಕಡಲಿನ ನಡುವೆ ಬಲೆ ಬೀಸುವ ಆ ಬೆಸ್ತರ ಗಂಡಿಗೆ ಹುಣ್ಣಿಮೆಯ ಬೆಳಕಲಿ ಪ್ರತಿಫಲಿಸುವ ತೆರೆಗಳು ಅಲ್ಲಿ, ಮೀನು ಕೊಯ್ಯಲು ಕುಳಿತ ಅವಳ ಕತ್ತಿಯ ಅಲಗಿನ ನೆನಪ ತಂದಿತು. 
ಗುಟುಕು ಪ್ರಾಣವೂ ಇಲ್ಲದ ಆ ಮೀನು ಮಾತ್ರ ಅವರಿಬ್ಬರ ನಡುವಿನ ಸೇತುವೆಯಾಗಿತ್ತು.  

ಯೋಗೀಶ್ ಮಲ್ಲಿಗೆಮಾಡು

Wednesday, 5 May 2021

ಕರೊನಾವಳಿ

ಎಲ್ಲ ದೀಪವ ತಂದು ಒತ್ತಾಗಿ ಹಚ್ಚಿದರೆ
ದೀಪ ಬೆಳಗುವ ಚೆಂದ ಕಾಣಬಹುದೆ?
ಎಲ್ಲೊ ದೂರದಿ ನಿಂತು ಕಣ್ತುಂಬಿ ನೋಡಿದರೆ
ದೀಪ ಧಗಿಸುವ ಹಾಗೆ ಕಾಣದಿರದೆ?

ದೂರ ದೂರದಲೊಂದು ದೀಪ ದೀಪವ ಹಚ್ಚಿ
ಚೆಲುವ ಸಾಲನು ಹಾಗೆ ನೋಡಬೇಕು.
ಕ್ರೂರ ಕತ್ತಲ ನಡುವೆ ಬಂಗಾರ ಥಳಥಳಿಸಿ
ಬೆಳಕು ಬೆಡಗನು ದೀಪ ನೀಡಬೇಕು.

ದೀಪಗಳ ತೆರದಲ್ಲಿ ನಾವಿಂದು ಸರಿಯುತ್ತ
ಅಂತರವ ಕಾಯುತ್ತ ನಿಲ್ಲಬೇಕು.
ಶಾಪದಂತೆರಗಿರುವ ವೈರಾಣುವಿನ ಮೇಲೆ
ನಿಂತು ದೂರಕೆ ದೂರ ಗೆಲ್ಲಬೇಕು.

ನಮ್ಮ ದೀಪದ ಬೆಳಕು ಮತ್ತೊಬ್ಬನೆದೆ ಬೆಳಕ
ಆರಿಸದೆ ಕಾಯುತ್ತಲಿರಲು ಬೇಕು.
ನಿಮ್ಮ ತನಕಕೆ ನಾನು ಬೆಳಕಷ್ಟೆ ಬೀರುವೆನು
ಬರಿದೆ ನಿಮ್ಮನು ಏಕೆ ಕಾಡಬೇಕು.

ದೀಪಗಳ ಸಾಲಂತೆ ಅಂತರವ ಕಾಯೋಣ
ನಾಶವಾಗಲಿ ಜಗದ ಕರೊನಾವಳಿ.
ಅಪಘಳಿಗೆ ಕಳೆಯಲಿ, ಮನೆ ಮನವ ಬೆಳಗಲಿ
ದೇಶದಲಿ ನಗೆ ತುಂಬಿ ದೀಪಾವಳಿ. 

         ಯೋಗೀಶ್ ಮಲ್ಲಿಗೆಮಾಡು 

Saturday, 27 March 2021

ಕೊರೋನಾ ಘಟ್ಟದ ಕವಿತೆಗಳು

ಕೊರೋನಾಟ್ಟದ ವಿತೆಗಳು

* ನಿನ್ನ ಹೂದುಟಿಯ
   ಜೇನ ಹೀರಲು ಬಂದೆ,
   ನನ್ನೀ ಮಾಸ್ಕು ಅಡ್ಡಬಂದಿತು.

* ಮುಖದ ಮೇಲೆ
   ಮಾಸ್ಕು ತೊಟ್ಟವರಿಲ್ಲ.
   ಮುಖವಾಡದ ಮೇಲೆಯೆ
   ಮಾಸ್ಕು ತೊಟ್ಟವರೆಲ್ಲ.

* ಪನ್ನೀರಲ್ಲೆ ಕೈ ತೊಳೆಸುವೆ ಎಂದವನೀಗ,
   ಸ್ಯಾನಿಟೈಸರ್ ಸುರಿಯುತ್ತಿದ್ದಾನೆ!

* ನಗು ಕಾಣಲಿ ಎಂದು ಮಾಸ್ಕು ಜಾರಿಸಿ ನಕ್ಕೆ,
   ಅವಳು ಜೋರಾಗಿ ಕೆಮ್ಮಿದಳು !!

* ಹತ್ತಿರ ಹತ್ತಿರ ಬಾ ಎಂದು ಹಾಡಿದೆ.
   ದಂಡ ಬಿತ್ತು!

ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Monday, 22 February 2021

ಹೀ'ಗೇ'ಕೆ ?

ಮಗನ ಪ್ರೀತಿಯನ್ನು ಮನೆಯಲ್ಲಿ ತಿರಸ್ಕರಿಸಲಾಗಿತ್ತು. ಮನೆಯಲ್ಲಿ ನೀರವ ಮೌನ. ಆಕೆ ತನ್ನ ಕೈಯಲ್ಲಿರುವ ಡೈರಿಯಲ್ಲಿನ ಆ ಪುಟವನ್ನೇ ದಿಟ್ಟಿಸುತ್ತಾ ಕೂತಿದ್ದಾಳೆ. ಅದರಲ್ಲಿ ಹೀಗೆಂದು ಬರೆದಿತ್ತು. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."


ಅವಳಿಗೆ ಅವಳ ಪ್ರೀತಿಯ ದಿನಗಳ ನೆನಪಾಯಿತು. ಮನೆಯಲ್ಲಿ ಧರ್ಮ ಜಾತಿಯ ಕಾರಣ ಅವಳ ಪ್ರೀತಿಯನ್ನು ಒಪ್ಪಲಿಲ್ಲ. ಅಪ್ಪ ಬೇರೆ ಹುಡುಗನನ್ನು ನೋಡುವ ತಯಾರಿಯಲ್ಲಿದ್ದರು. ಆಕೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಬದುಕು ಕಟ್ಟಿಕೊಂಡಳು. ಆಗ ಆ ಡೈರಿಯ ಪುಟದಲ್ಲಿ ಹಾಗೆಂದು ಬರೆದಿದ್ದಳು. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಪ್ರೀತಿಸುವವನೊಂದಿಗೆ ಬದುಕು ಕಟ್ಟಿಕೊಂಡ ಆಕೆಗೆ ಒಂದು ಗಂಡು ಮಗುವೂ ಆಯಿತು. ಸುಖಿ ಕುಟುಂಬ. ಕಾಲ ಓಡಿದ್ದೇ ತಿಳಿಯಲಿಲ್ಲ. ಮಗನಿಗೀಗ 25 ವರ್ಷ. ಆತ ಹೆತ್ತವರೆದುರು ಬಂದು ನಿಂತು ತನ್ನ ಪ್ರೀತಿಯ ಬಗ್ಗೆ ಹೇಳಿದ್ದಾನೆ. ಆತನಿಗೆ ತನ್ನ ಗೆಳೆಯನ ಮೇಲೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಲಾಯಿತು. ಕಾರಣ ಜಾತಿ ಬೇರೆ ಎನ್ನುವುದಲ್ಲ, ಧರ್ಮ ಬೇರೆ ಎನ್ನುವುದಲ್ಲ, ಲಿಂಗ ಒಂದೇ ಎನ್ನುವುದು!!

ದಿಟ್ಟಿಸುತ್ತಿದ್ದ ಪುಟವನ್ನು ಆಕೆ ಹರಿದು ಹಾಕಿದಳು. ಮಗ ಒಳಗೆ ಕೋಣೆಯಲ್ಲಿ ಕೂತು ಬರೆಯುತ್ತಿದ್ದಾನೆ. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ." 

ಯೋಗೀಶ್ ಮಲ್ಲಿಗೆಮಾಡು