ಕಾರ್ತಿಕ ಪೌರ್ಣಮಿಯನ್ನು 'ದೇವ ದೀಪಾವಳಿ' ಎಂದು ಕರೆಯಲಾಗುತ್ತದೆ. ಚಾತುರ್ಮಾಸದ ಆರಂಭದಲ್ಲಿ ಬರುವ ಶಯನ ಏಕಾದಶಿಯಲ್ಲಿ ನಿದ್ರೆಗೆ ಜಾರುವ ಮಹಾವಿಷ್ಣು ಚಾತುರ್ಮಾಸದ ಅಂತ್ಯವಾಗುವ ಕಾರ್ತಿಕ ಮಾಸದ ಪ್ರಬೊಧಿನಿ ಏಕಾದಶಿಗೆ ಏಳುತ್ತಾನೆ ಎಂಬ ಪ್ರತೀತಿ ಇದೆ. ಈ ನಾಲ್ಕು ಮಾಸಗಳು ಹೆಚ್ಚು ಮಳೆ ಬೀಳುವ ಅವಧಿ ಆದ್ದರಿಂದ ಮತ್ತು ಸಾಲು ಹಬ್ಬಗಳು ಬರುವುದರಿಂದ ಈ ಸಮಯದಲ್ಲಿ ಮದುವೆ ಇನ್ನಿತರ ವಿಷೇಶ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾಗಿ ಇದು ವಿಷ್ಣುವಿನ ಶಯನ ಸಮಯ ಎಂದು ಉಲ್ಲೇಖಿಸಲಾಗಿದೆ.
ಯತಿಯಾದವನು ಒಂದು ಪ್ರದೇಶದಲ್ಲಿ ಎರಡು ದಿನಕ್ಕಿಂತ ಹೆಚ್ಚು ತಂಗುವ ಪದ್ಧತಿ ಇಲ್ಲ. ಆದರೆ, ಚಾತುರ್ಮಾಸದ ಅವಧಿಯಲ್ಲಿ ಮಾತ್ರ ಪರ್ಯಟನೆಗೆ ತೊಡಕಾಗುವ ಕಾರಣ ಯತಿಗಳು ಒಂದು ಕಡೆ ಇದ್ದು ಚಾತುರ್ಮಾಸ್ಯ ನೆರವೇರಿಸುತ್ತಾರೆ.
ವರ್ಷವಿಡೀ ಭಕ್ತರ ಬಳಿ ತೆರಳುವ ಯತಿಗಳನ್ನು ಚಾತುರ್ಮಾಸದ ಅವಧಿಯಲ್ಲಿ ಭಕ್ತರೇ ಯತಿಗಳ ಬಳಿ ತೆರಳಿ ಗುರುದರ್ಶನ ಪಡೆಯುವುದು ವಾಡಿಕೆ.
ಪ್ರಬೋಧಿನಿ ಏಕಾದಶಿಯ ಮರು ದಿನವೇ ತುಳಸಿ ವಿವಾಹವನ್ನು ನಡೆಸಲಾಗುತ್ತದೆ. ಯತಿಗಳು ತುಳಸಿ ವಿವಾಹ ಸಂಪನ್ನಗೊಳಿಸಿ ಚಾತುರ್ಮಾಸ ಕೊನೆಗೊಳಿಸಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ತುಳಸಿ ವಿವಾಹವು ವದುವೆಗಳಿಗೆ ವಿದ್ಯುಕ್ತ ಚಾಲನೆಯೂ ಹೌದು.
ಉತ್ಥಾನ ದ್ವಾದಶಿಯ ತುಳಸಿ ಪೂಜೆಯ ನಂತರ ಬರುವ ಹುಣ್ಣಿಮೆಯೇ ದೇವ ದೀಪಾವಳಿ. ಈ ದಿನ ದೇವತೆಗಳು ಗಂಗಾ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ ಎನ್ನುವ ನಂಬಿಕೆಯೂ ಇದೆ. ಈ ದಿನ ವರ್ಷದ ಲೆಕ್ಕದಲ್ಲಿ ಮುನ್ನೂರ ಅರವತ್ತೈದು ಬತ್ತಿ ಹೊಸೆದು ದೀಪ ಹಚ್ಚಿ ಆಲದ ಮರ, ನದಿ ತಟ, ತುಳಸಿಯ ಅಡಿಯಲ್ಲಿ ಇಡುವುದು ವಿಶೇಷ.
ಆಲದ ಮರದಲ್ಲಿರುವ ಹಕ್ಕಿಗಳು, ನದಿಯಲ್ಲಿರುವ ಮೀನುಗಳು, ಸುತ್ತಲಿರುವ ಪಶು ಪಕ್ಷಿ, ಕೀಟಗಳೆಲ್ಲ ಕತ್ತಲ ನಡುವೆ ಹಚ್ಚಿದ ದೀಪದ ಬೆಳಕನ್ನು ಕಂಡು ಆತ್ಮೋನ್ನತಿ ಹೊಂದಲಿ ಎನ್ನುವ ಉದಾತ್ತ ಆಶಯ ಈ ದೀಪಜ್ವಲನದ ಹಿಂದಿದೆ.
ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಪ್ರಕ್ರಿಯೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ತುಳುನಾಡಿನಾದ್ಯಂತ ನಡೆಯುವ ಲಕ್ಷ ದೀಪೋತ್ಸವವೂ ಇದರದ್ದೇ ಒಂದು ಬಗೆ. ರಾಮರಾಜ ಕ್ಷತ್ರಿಯ ಸಮುದಾಯದ ಜನರು ಇದೇ ದಿನ ಸೌತೆಕಾಯಿಯ ಒಳ ತಿರುಳನ್ನು ತೆಗೆದು ದೀಪದಂತೆ ಮಾಡಿ ಅದರಲ್ಲಿ ದೀಪ ಹಚ್ಚುವ ಪುರಾತನ ಪದ್ಧತಿಯೂ ಇದೆ.
ಯೋಗೀಶ್ ಮಲ್ಲಿಗೆಮಾಡು