'ಕ್ಷತಾತ್ ತ್ರಾಯತೆ ಇತಿ ಕ್ಷತ್ರಿಯ' ಅರ್ಥಾತ್ ಗಾಯ, ನೋವು, ಹಿಂಸೆಯಿಂದ ರಕ್ಷಿಸುವುದು ಕ್ಷಾತ್ರಧರ್ಮ. ಹಾಗಾಗಿ ರಕ್ಷಣೆಯನ್ನು ಒದಗಿಸುವುದು ಕ್ಷತ್ರಿಯತ್ವ. ಇಂತಹ ಕ್ಷತ್ರಿಯತ್ವದಲ್ಲಿ ಉಲ್ಲೇಖಿಸಲ್ಪಡುವ ಒಂದು ಸಮುದಾಯ 'ರಾಮಕ್ಷತ್ರಿಯ'.
ನಮ್ಮ ದೇಶದಲ್ಲಿ ಅನೇಕ ಸಮುದಾಯಗಳು ಆಯಾಯ ಪ್ರಾದೇಶಿಕತೆಯಲ್ಲಿ ಬೆಳೆದುಬಂದಿದೆ. ದೇಶದ ಇತಿಹಾಸದ ಪುಟಗಳನ್ನು ತಿರುವಿದರೆ ಈ ಎಲ್ಲಾ ಸಮುದಾಯಗಳು ಆಯಾ ಪ್ರಾದೇಶಿಕತೆಯಲ್ಲಿ ಈ ನೆಲಕ್ಕೆ, ಇಲ್ಲಿಯ ಸಂಸ್ಕೃತಿ, ಆಚಾರ-ವಿಚಾರಗಳಿಗೆ ತಮ್ಮದೇ ರೀತಿಯ ಕೊಡುಗೆಗಳನ್ನು ನೀಡಿದೆ. ಇದನ್ನು ನಾವು ದೇಶದಾದ್ಯಂತ ಕಾಣಬಹುದು. ಇಂತಹ ಅನೇಕ ಸಮುದಾಯಗಳ ನಡುವೆ ತಮ್ಮದೇ ಆದ ಭಾಷಾವೈವಿಧ್ಯತೆ, ಆಚರಣೆ, ರೀತಿ-ನೀತಿಗಳಿಂದ ವಿಶೇಷವಾಗಿ ಕಂಡುಬರುವ ಸಮುದಾಯ 'ರಾಮಕ್ಷತ್ರಿಯ' ಸಮುದಾಯ.
ರಾಮಕ್ಷತ್ರಿಯ, ರಾಮರಾಜಕ್ಷತ್ರಿಯ, ಕೋಟೆಗಾರ್, ಕೋಟೆಯಾರ್, ಸೇರ್ವೆಗಾರ್, ಶೇರಿಗಾರ್, ಚೇರಕಾರ್ ಮುಂತಾದ ಹೆಸರಿನಿಂದ ಗುರುತಿಸಲ್ಪಡುವ ಈ ಸಮುದಾಯವು ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ, ಕಾಸರಗೋಡು, ಕಾಞಂಗಾಡು ಪ್ರದೇಶದ ಕರಾವಳಿಯ ಉದ್ದಗಲಕ್ಕೂ ಹರಡಿಕೊಂಡಿದೆ. ಕ್ಷತ್ರಿಯರು ಸೈನ್ಯ, ಆಡಳಿತ, ರಕ್ಷಣೆಯ ವ್ಯವಸ್ಥೆಯಲ್ಲಿ ನಿಯೋಜಿಸಲ್ಪಟ್ಟವರು. ರಾಜರ ಕಾಲದಲ್ಲಿ ಕೋಟೆಗಳನ್ನು ಕಟ್ಟಿ ರಾಜ್ಯದ ರಕ್ಷಣೆಯನ್ನು ನಿರ್ವಹಿಸುತ್ತಿದ್ದ ವಿಚಾರ ತಿಳಿದಿರುವಂತದ್ದೆ. ಈ ಸಂಬಂಧ ರಾಜ್ಯದ ರಕ್ಷಣೆಯ ಜೊತೆಗೆ ಕಡಲಿನ ಮೂಲಕ ನಡೆಯಬಹುದಾದ ದಾಳಿಗಳನ್ನು ತಪ್ಪಿಸಲು ವಿಶೇಷವಾಗಿ ಕರಾವಳಿಯ ಉದ್ದಗಲಕ್ಕೂ ಅಲ್ಲಲ್ಲಿ ಕೋಟೆಗಳನ್ನು ಕಟ್ಟಿ ಆ ಮೂಲಕ ದಾಳಿಕೋರರಿಂದ ಕರಾವಳಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೋಟೆಗಳಿಗೆ ರಾಮಕ್ಷತ್ರಿಯರನ್ನು ನಿಯೋಜಿಸಿದ್ದರು ಎಂದು ತಿಳಿದು ಬರುತ್ತದೆ. ಇಂದಿನ ಕರಾವಳಿಯ 'ತಟ ರಕ್ಷಣಾ ಪಡೆ' ರೀತಿಯಲ್ಲಿ ಆಗಿನ ಕಾಲಘಟ್ಟದಲ್ಲಿ ರಾಮ ಕ್ಷತ್ರಿಯರು ವಿಶೇಷ ಪರಿಣಿತರಾಗಿದ್ದರು ಎಂದು ಊಹಿಸಬಹುದಾಗಿದೆ. ಹೀಗೆ ಕೋಟೆಗಳಲ್ಲಿ ಕಾವಲು ನಿಂತು ರಾಜ್ಯ ರಕ್ಷಣೆ ಮಾಡಿದ ರಾಮಕ್ಷತ್ರಿಯರು ಇಲ್ಲಿನ ಆಡುಭಾಷೆಯಲ್ಲಿ 'ಕೋಟೆಯವರು' ಎಂದೇ ಪ್ರಖ್ಯಾತರಾದರು.
ರಾಮಕ್ಷತ್ರಿಯರ ಮೂಲ: ರಾಮಕ್ಷತ್ರಿಯರ ಮೂಲದ ಕುರಿತು ಮಹಾರಾಷ್ಟ್ರದ ರತ್ನಗಿರಿ ಎಂದು ಉಲ್ಲೇಖಿಸಿದೆ. ಆದರೆ ಈ ಸಮುದಾಯದ ಆಚರಣೆ ಹಾಗೂ ಭಾಷಾ ಶೈಲಿಯನ್ನು ಪರಿಶೀಲಿಸಿದರೆ ಹೆಚ್ಚಾಗಿ ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬಯಲು ಸೀಮೆ ಭಾಗಕ್ಕೆ ಹೋಲಿಕೆ ಕಂಡುಬರುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಇದ್ದಿರಬಹುದಾದ ಈ ಸಮುದಾಯವನ್ನು ವಿಜಯನಗರ ಸಾಮ್ರಾಜ್ಯದ ಪತನಾನಂತರ ಇಕ್ಕೇರಿಯ ನಾಯಕರು ಪ್ರಾಬಲ್ಯಕ್ಕೆ ಬಂದು ಮಲೆನಾಡಿನ ವ್ಯಾಪ್ತಿಗೆ ಹಾಗೂ ಅವರ ಆಳ್ವಿಕೆಯಲ್ಲಿದ್ದ ಮಹಾರಾಷ್ಟ್ರ ಪ್ರಾಂತ್ಯಕ್ಕೆ ಸೈನ್ಯ ನಿಯೋಜನೆಯ ದೃಷ್ಟಿಯಿಂದ ಕರೆತಂದಿರಬಹುದು.
(ಮೂಲತಃ ಸರಸ್ವತಿ ನದಿ ತೀರದಲ್ಲಿದ್ದ ಈ ಸಮುದಾಯ ಕಾಲಕ್ರಮೇಣ ಬಂಗಾಲದ ಕಡೆಗೆ ವಲಸೆ ಹೋಗಿ ಅಲ್ಲಿಂದ ಆಂಧ್ರದ ಕಡೆ ನೆಲೆಗೊಂಡು ಅಲ್ಲಿಂದ ಮಹಾರಾಷ್ಟ್ರ ಪ್ರಾಂತ್ಯಕ್ಕೆ ಬಂದಿತು ಎಂದು ಅಭಿಪ್ರಾಯವೂ ಇದೆ)
ಇಕ್ಕೇರಿಯ ಅರಸ ಹಿರಿಯ ವೆಂಕಪ್ಪ ನಾಯಕ (1586-1629) ಸೈನ್ಯವನ್ನು ವಿಸ್ತರಿಸಿ ಚಂದ್ರಗಿರಿ, ಬೇಕಲ ಮುಂತಾದ ಕಡೆ ರಾಜ್ಯ ವಿಸ್ತರಣೆ ಮಾಡಿ ಈ ಸಮುದಾಯವನ್ನು ಇಲ್ಲಿ ನೆಲೆಗೊಳಿಸಿದ್ದು ಇಂದಿಗೆ ಇತಿಹಾಸ. ನಮ್ಮ ಮೂಲವು ಆಂಧ್ರ ಹಾಗೂ ಬಳ್ಳಾರಿ ಆಗಿದ್ದಿರಬಹುದು ಎಂಬ ನನ್ನ ನಿಲುವಿಗೆ ಪ್ರಮುಖ ಕಾರಣ ಇಂದಿಗೂ ಆಂಧ್ರದಲ್ಲಿ ನಡೆಯುವ 'ಹುಣ್ಣಿಮೆ ಹಬ್ಬ'ದ ರೀತಿಯ 365 ಬತ್ತಿಯೊಂದಿಗೆ ದೀಪ ಹಚ್ಚುವ ಆಚರಣೆ ಹಾಗೂ ಇತರೆ ಹಬ್ಬಹರಿದಿನಗಳ ಆಚರಣೆಯು ಘಟ್ಟದ ಮೇಲಿನ ಬಯಲು ಸೀಮೆಗೆ ಹೆಚ್ಚು ಸಾಮ್ಯತೆ ಹೊಂದಿರುವುದು. ಭಾಷಾ ದೃಷ್ಟಿಯಿಂದಲೂ ಮಲೆನಾಡ ಕನ್ನಡಕ್ಕೆ ಹೋಲಿಕೆ ಇರುವುದನ್ನು ಕಾಣಬಹುದು.
ಕುಟುಂಬ: ಭಾರತದ ಸಂಸ್ಕೃತಿಯು ಏಕರೂಪದಲ್ಲ, ಬಹುರೂಪದ್ದು. ಹಾಗಾಗಿ ನಾವಿಲ್ಲಿ ಪಿತೃಪ್ರಧಾನ ಹಾಗೂ ಮಾತೃಪ್ರಧಾನ ಹೀಗೆ ಎರಡೂ ರೀತಿಯ ವ್ಯವಸ್ಥೆಯನ್ನು ಒಳಗೊಂಡ ಸಮುದಾಯಗಳನ್ನು ಕಾಣಬಹುದಾಗಿದೆ. ರಾಮಕ್ಷತ್ರಿಯ ಕುಟುಂಬವು ಪಿತೃಪ್ರಧಾನ ವ್ಯವಸ್ಥೆಯನ್ನು ಹೊಂದಿದ್ದು. ಕುಲ, ಗೋತ್ರ, ಪ್ರವರ ಮೊದಲ ಚೌಕಟ್ಟಿನಲ್ಲಿ ಬೆಳೆದು ನಿಂತಿದೆ. ವಿಶ್ವಾಮಿತ್ರ, ಭಾರದ್ವಾಜ, ಜಮದಗ್ನಿ, ಗೌತಮ, ವಸಿಷ್ಠ, ಕಾಶ್ಯಪ, ವೈಶಂಪಾಯ ಹೀಗೆ ಹಲವು ಗೋತ್ರ ಪ್ರವರ್ತಕರ ಗುರುಕುಲದಲ್ಲಿ ವಿದ್ಯಾದೀಕ್ಷಿತರಾಗಿದ್ದ ನಮ್ಮ ಪೂರ್ವಜರನ್ನು ಅನುಸರಿಸಿ ಆಯಾ ಗೋತ್ರದಲ್ಲಿ ನಮ್ಮ ಕುಟುಂಬಗಳು ಮುಂದುವರೆದಿದೆ. ಗೋತ್ರದಷ್ಟೇ ಪ್ರಮುಖವಾದ ಮತ್ತೊಂದು ವಿಚಾರ ಕುಟುಂಬದ ದೇವರು. ಒಂದೊಂದು ಕುಟುಂಬವು ತಮ್ಮ ತಮ್ಮ ದೇವರನ್ನು ಹೊಂದಿದ್ದು ಕಾಲಕಾಲಕ್ಕೆ ಸೈನ್ಯವನ್ನು ಜಮಾವಣೆ ಮಾಡುವುದಕ್ಕಾಗಿ ರಾಮಕ್ಷತ್ರಿಯರನ್ನು ಎಲ್ಲೆಲ್ಲಿ ನೆಲೆಗೊಳಿಸುತ್ತಿದ್ದರೊ ಅಲ್ಲೆಲ್ಲಾ ಈ ಸಮುದಾಯವು ತಮ್ಮ ದೇವರನ್ನು ಜೊತೆಯಲ್ಲೆ ತೆಗೆದುಕೊಂಡು ಹೋಗಿ ಪೂಜೆ-ಪುನಸ್ಕಾರಾದಿಗಳನ್ನು ನಡೆಸುತ್ತ ನಂಬಿದ್ದಾರೆ.
ಶೈವ ಮತವನ್ನು ಅವಲಂಬಿಸಿದ್ದ ಈ ಸಮುದಾಯವು ಶೈವ ಹಾಗೂ ಶಾಕ್ತ ಆರಾಧನೆಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಅನೇಕ ಕುಟುಂಬಗಳ ದೇವರು ಶಿವ ಹಾಗೂ ಶಕ್ತಿಯ ಹೆಸರಿನಿಂದಲೇ ಸೂಚಿತವಾಗಿದೆ. ಹೀಗೆ ಕುಲದೇವರ ಆರಾಧನೆಯನ್ನು ಕುಟುಂಬದ ಮುಖ್ಯ ವ್ಯಕ್ತಿ ನಡೆಸಿಕೊಡುವುದು ಮತ್ತು ಮನೆಯಲ್ಲಿ ಆರಾಧನೆಯನ್ನು ಮನೆಯ ಯಜಮಾನ ನಡೆಸುವುದು ಈ ಸಮುದಾಯದ ಕೌಟುಂಬಿಕ ಪದ್ಧತಿಯ ವೈಶಿಷ್ಟ್ಯ.
ಗುರುಪೀಠ: ಮೇಲಾಗಿ ಕವಳೆ ಮಠಕ್ಕೆ ಗುರುಪೀಠವೆಂದು ನಡೆದುಕೊಳ್ಳುತ್ತಿದ್ದ ರಾಮಕ್ಷತ್ರಿಯ ಸಮುದಾಯವು ಕೊಂಕಣಸ್ಥರೊಂದಿಗಿನ ವಿವಾದದಿಂದ ಅದು ಅರಸನ ತನಕವೂ ಹೋಗಿ ಕೆಳದಿಯ ಅರಸ ವೀರಭದ್ರಪ್ಪನಾಯಕ ಬರೆಸಿಕೊಟ್ಟ ನಿರೂಪದಂತೆ ಕವಳೆ ಮಠವನ್ನು ತೊರೆದು ಶೃಂಗೇರಿ ಮಠವನ್ನು ನಡೆದುಕೊಳ್ಳತೊಡಗಿದೆವು. ಈ ನೆಲೆಯಲ್ಲಿ ಮೂಲ ಗುರುಪೀಠ ಕವಳೆ ಮಠವಾಗಿದ್ದು ನಂತರದಲ್ಲಿ ಶೃಂಗೇರಿ ಮಠವಾದುದಕ್ಕೆ ಮಠಕ್ಕೆ ನೀಡಿದ ಭಿನ್ನವತ್ತಳೆಯೇ ಸಾಕ್ಷಿ. ಇಂದಿಗೂ ಗುರುಮಠಕ್ಕೆ ಕಾಣಿಕೆ ಒಪ್ಪಿಸುವ, ಗುರುಗಳ ಆಶೀರ್ವಚನ ಪಡೆಯುವ ಪದ್ಧತಿ ನಡೆದುಕೊಂಡೇ ಬಂದಿದೆ.
ಆಚರಣೆ: ಷೋಡಶೋಪಚಾರಗಳೇ ಮೊದಲಾದ ಆಚರಣೆಗಳನ್ನು ಪಾಲಿಸುವ ರಾಮಕ್ಷತ್ರಿಯ ಸಮುದಾಯ ವೈಶಿಷ್ಠ್ಯಪೂರ್ಣ ಆಚರಣೆಗಳನ್ನು ಒಳಗೊಂಡಿದೆ.
ಸೈನಿಕ ವೃತ್ತಿಯಾದ್ದರಿಂದ ಬಲಿದಾನ, ವೀರಮರಣಗಳು ಸಾಮಾನ್ಯವೇ ಆಗಿದ್ದರಿಂದ ಸ್ತ್ರೀಯರಿಗೆ ವೈಧವ್ಯಯೋಗ ಎನ್ನುವುದು ವಿವಾಹದ ಜೊತೆಜೊತೆಗೆ ಇರುತ್ತಿದ್ದದ್ದು ಆಶ್ಚರ್ಯವೇನಾಗಿರಲಿಲ್ಲ. ಹಾಗಾಗಿ ವೈಧವ್ಯಯೋಗ ಪ್ರಾಪ್ತಿಯಾಗದಿರಲಿ ಮತ್ತು ಅಂತಹುದೇನಾದರೂ ಆಗುವುದಾದರೆ ಧಾರೆಯ ಮೊದಲೆ ನಡೆಯಲಿ ಎಂಬ ನಂಬಿಕೆಯಂತೆ "ಅಂಕೋಲ ಧಾರೆ" ಎನ್ನುವ ವಿಶೇಷ ಧಾರೆಯನ್ನು ಮದುವೆಯ ಧಾರೆಯ ಮೊದಲೇ ನೆರವೇರಿಸಲಾಗುತ್ತದೆ. ಹಾಲು ಸ್ರವಿಸುವ ಅತ್ತಿಮರದ ಗೆಲ್ಲಿನ ಅಡಿಯಲ್ಲಿ ವಧು-ವರರಿಗೆ ಧಾರೆಯನ್ನು ಅತ್ತಿ ಗೆಲ್ಲಿನ ಜೊತೆ ಬೇರೆಬೇರೆಯಾಗಿ ಮಾಡಲಾಗುತ್ತದೆ. ಇದೊಂದು ವಿಶೇಷವಾದ ಆಚರಣೆ.
ಕಾರ್ತಿಕ ಪೌರ್ಣಮಿಯನ್ನು "ದೇವ ದೀಪಾವಳಿ" ಎಂದು ಕರೆಯಲಾಗುತ್ತದೆ. ರಾಮಕ್ಷತ್ರಿಯ ಸಮುದಾಯದ ಸ್ತ್ರೀಯರು ಆ ದಿನ ಉಪವಾಸವಿದ್ದು ತುಳಸಿಗೆ ಕಟ್ಟಿದ ಬಾಳೆಯ ದಿಂಡಿನಿಂದ ತಾಯಿ-ಮಗುವನ್ನು ಮಾಡಿ ಅಲಂಕಾರದೊಂದಿಗೆ ಬಾವಿಗೆ ಬಿಟ್ಟು "ಸಂತತಿ ಸಾವಿರವಾಗಲಿ" ಎಂದು ಬೇಡಿಕೊಳ್ಳುವ ಹಾಗೂ ರಾತ್ರಿಗೆ ತುಳಸಿಕಟ್ಟೆಗೆ ಉಪ್ಪಿರದ ನೀರು ದೋಸೆಯನ್ನು ಅರ್ಪಿಸಿ, ಅಕ್ಕಿ ಮಡಿಕೆಯ ಮೇಲಿನ ಸೌತೆಕಾಯಿಯನ್ನು ದೀಪದಂತೆ ಮಾಡಿ "ವರ್ಷನೆಣೆ"ಯನ್ನು 365 ಬತ್ತಿ ಹಚ್ಚಿ ಆಚರಿಸುತ್ತಾರೆ. ಕಾರ್ತಿಕೋತ್ಸವದ ಈ ಸಮಯ ಗಿಡಮರದಲ್ಲಿರುವ ಹಕ್ಕಿಗಳು ಬೆಳಕನ್ನು ಕಂಡು ಆತ್ಮಜ್ಞಾನವನ್ನು ಪಡೆಯುವಂತಾಗಲಿ ಎನ್ನುವ ಉದಾತ್ತ ಕಲ್ಪನೆಯೇ ಈ ಆಚರಣೆಯ ಹಿಂದೆ ಅಡಗಿರುವುದು ವಿಶೇಷ.
ಅನುಷ್ಠಾನ: ಉಪನಯನವೇ ಮೊದಲಾದ ದೀಕ್ಷೆ ಕೈಗೊಂಡ ಬ್ರಹ್ಮಚಾರಿಯು ಸಂಧ್ಯಾವಂದನೆಯ ನೇಮನಿಷ್ಠೆಗಳ ಅನುಷ್ಠಾನವನ್ನು ಕೈಗೊಳ್ಳುವುದು ಪ್ರಮುಖವಾದುದು. ಸಂಸಾರಿಯೂ ಕೂಡ ಈ ಸಮುದಾಯದಲ್ಲಿ ಪ್ರಾತಃಸಂಧ್ಯಾ, ಮಧ್ಯಾಹ್ನಿಕ ಸಂಧ್ಯವಂದನೆ ಹಾಗೂ ಸಾಯಂಸಂಧ್ಯಾವಂದನೆ ನೆರವೇರಿಸುವ ಪರಿಪಾಠವಿತ್ತು. ಶೈವಾರಾಧಕರಾದ್ದರಿಂದ ಭಸ್ಮವನ್ನು ಮೂರು ಹೊತ್ತು ಲೇಪಿಸುವ ಪದ್ಧತಿಯ ಅನುಷ್ಠಾನವಿತ್ತು. ಪ್ರತಿಮನೆಯಲ್ಲೂ ಭಸ್ಮವನ್ನು ತುಂಬಿಡಲು ಮರದ ಕೆತ್ತನೆಗಳಿರುವ ವಿಶೇಷ ಕರಂಡಕಗಳನ್ನು ನೇತಾಡಿಸುತ್ತಿದ್ದರು. ಉಪವಾಸಾದಿ ವೃತಾನುಷ್ಠಾನಗಳನ್ನು ಅನುಸರಿಸುತ್ತಿದ್ದರು.
ಉಪಸಂಹಾರ: ಒಟ್ಟಿನಲ್ಲಿ ಸೈನಿಕ ವೃತ್ತಿಯ ರಾಮಕ್ಷತ್ರಿಯ ಸಮುದಾಯವು ಕಾಲಕಾಲಕ್ಕೆ ಯುದ್ಧಗಳು ನಡೆದಾಗ, ರಾಜ್ಯವಶವಾದಾಗ, ರಾಜ್ಯವಿಸ್ತರಣೆಯಾದಾಗ ಆಯಾ ಪ್ರದೇಶಗಳಿಗೆ ನಿಯೋಜನೆಗೊಂಡು, ಒಂದೆಡೆ ನೆಲೆ ನಿಲ್ಲದೆ ನಿರಂತರ ಜಂಗಮರಾಗಿ ಇದ್ದವರು. ಆದಕಾರಣ ಇದುವೇ ನಮ್ಮ ಮೂಲ ಎಂದು ಹೇಳುವುದು ಕಷ್ಟಸಾಧ್ಯ. ಅಲ್ಲದೆ ಹೀಗೆ ಒಂದೆಡೆಯಿಂದ ಮತ್ತೊಂದೆಡೆಗೆ ನಿರಂತರ ಚಲನಶೀಲವಾದ ಸಮುದಾಯದ ಅನೇಕ ಆಚರಣೆಗಳು, ಪದ್ಧತಿಗಳು ಲುಪ್ತವಾಗಿರಬಹುದು ಹಾಗೂ ತಾವು ನೆಲೆನಿಂತ ಪ್ರದೇಶದ ಜೊತೆ ಬೆರೆತು ಹೋಗಿರಬಹುದು. ರಾಮಕ್ಷತ್ರಿಯರ ಅಸ್ಮಿತೆಯನ್ನು ಹುಡುಕುವುದಾದರೆ ಅದು ಈ ಭಾರತದ ಉದ್ದಗಲಕ್ಕೂ ಚಾಚಿರಬಹುದು. ಇಷ್ಟಾದರೂ ಅದೆಷ್ಟೊ ಆಚರಣೆ, ಅನುಷ್ಠಾನ, ಪದ್ಧತಿ, ರೀತಿ, ನೀತಿ, ಗುರುಪೀಠ, ಕೌಟುಂಬಿಕ ಚೌಕಟ್ಟು ಇವೆಲ್ಲವನ್ನು ಕಾಪಾಡಿಕೊಂಡು ಇಂದಿಗೂ ಛಲದಿಂದ ಬದುಕುತ್ತಾ ತಾವು ನೆಲೆನಿಂತ ಪ್ರದೇಶದ ಜೊತೆ ಒಂದಾಗಿ ಸಾಮರಸ್ಯದಿಂದ ಬಾಳುತ್ತಿರುವುದು ವಿಶೇಷವೂ ಹೌದು ಅಭಿನಂದನೀಯವೂ ಹೌದು.
ರಚನೆ: ಯೋಗೀಶ್ ಮಲ್ಲಿಗೆಮಾಡು
( ರಾಮಕ್ಷತ್ರಿಯ ಸಾಹಿತ್ಯ ವಾಟ್ಸ್ಅಪ್ ಬಳಗ, ರಾಮಕ್ಷತ್ರಿಯ ಮಾಸಪತ್ರಿಕೆ ಮತ್ತು ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ ಇವರು ಆಯೋಜಿಸಿದ್ದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಲೇಖನ)
No comments:
Post a Comment
Note: only a member of this blog may post a comment.