ತೇರೊಂದು ನಿಂತಿಹುದು
ತೇರಿನಲಿ ನಗುತಿಹಳು
ಊರ ತಾಯಿ
ಸೋತು ಬಂದಿಹ ಮಂದಿ
ತಾಯ ಮಡಿಲಿಗೆ ಬಂದು
ಕೈ ಮುಗಿದು ಬೇಡುವರು
ನೀನೆ ಕಾಯಿ
ಉಟ್ಟ ಹಸಿರಿನ ಸೀರೆ
ಹಣೆಯ ಕೆಂಪನೆ ಬೊಟ್ಟು
ತಾಳೆಂದು ಕೈದೋರಿ
ಅಭಯ ಮುದ್ರೆ
ತಾಯ ಸಾನಿಧ್ಯದಲಿ
ಅವಳ ಸಾಮಿಪ್ಯದಲಿ
ಧೈರ್ಯ ತುಂಬುತಲಿಹಳು
ಲೋಕಭದ್ರೆ
ತೇರನೆಳೆವರು ಮಂದಿ
ಗುಡಿಯ ಸುತ್ತಲು ಒಮ್ಮೆ
ಬದುಕು ಎಂದರು ಕೂಡ
ಇಷ್ಟೆ ತಾನೆ?
ನಮ್ಮ ಬದುಕನು ನಾವೆ
ಎಳೆದು ನಡೆಸಲು ಬೇಕು
ಚಲನೆ ಎಂಬುವುದಿಲ್ಲಿ
ಬದುಕು ತಾನೆ?
ದೇಹವೇ ತೇರಾಗಿ
ನಿಂತಿಹುದು ಬಯಲಲ್ಲಿ
ಎದೆಗುಡಿಯ ಒಳಗಿಹಳು
ಲೋಕಶಕ್ತಿ
ಕಷ್ಟಕೋಟಲೆಯಿರಲಿ
ದುಃಖ ಸಂಕಟ ಬರಲಿ
ಬದುಕ ತೇರಿಗೆ ಇರಲಿ
ಅಮಿತಶಕ್ತಿ
ಯೋಗೀಶ್ ಮಲ್ಲಿಗೆಮಾಡು