Saturday, 24 December 2022

ರಾಮರಾಜ ಕ್ಷತ್ರಿಯ/ ಕೋಟೆ ಸಮಾಜದ ಇತಿಹಾಸ, ಇಂದಿನ ಪರಿಸ್ಥಿತಿ, ಮುಂದಿನ ನಿರೀಕ್ಷೆಗಳು

ಯೋಗೀಶ್ ಮಲ್ಲಿಗೆಮಾಡು

ಒಂದು ಕಾಲಘಟ್ಟದ, ಒಂದು ಜನ ಸಮುದಾಯ ಒಂದು ಪ್ರದೇಶದಲ್ಲಿ ಒಂದೇ ರೀತಿಯ ಆಚರಣೆ, ಪದ್ಧತಿ, ನೇಮ, ನಿಷ್ಠೆಗಳನ್ನು ಪರಿಪಾಲಿಸುತ್ತ ಬದುಕುವದನ್ನು ಆಯಾಯ ಸಮುದಾಯದ ಇತಿಹಾಸದಲ್ಲಿ ಕಂಡುಕೊಳ್ಳಲು ಸಾಧ್ಯ. ಭಾರತದಲ್ಲಿ ಇಂತಹ ಅನೇಕ ಸಮುದಾಯಗಳ ಇತಿಹಾಸವನ್ನು ಈ ನಿಟ್ಟಿನಲ್ಲಿ ಸಂಕಲಿಸಲು ಸಾಧ್ಯವಿದೆ. ಜೊತೆಗೆ, ಈ ಎಲ್ಲಾ ಸಮುದಾಯಗಳ, ಇತಿಹಾಸವೂ ಒಂದಕ್ಕೊಂದು ಬೆಸೆದುಕೊಂಡಿರುವುದನ್ನೂ ಕಾಣುತ್ತೇವೆ. ಇದಕ್ಕೆ ಬಹಳ ಪ್ರಮುಖವಾದ ಕಾರಣವೆಂದರೆ ಅದು ಈ ನೆಲದ ಜನರು ನಿರಂತರ ಚಲನಶೀಲವಾಗಿದ್ದದ್ದು. ಭಾಷೆ ಭಾಷೆಗಳ ನಡುವೆ, ಸಮುದಾಯ ಸಮುದಾಯಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ ಇದ್ದ ಕೊಡುಕೊಳ್ಳುವಿಕೆ ಇಂತಹ ವಿಶಿಷ್ಟ ಬೆಸುಗೆಗೆ ಕಾರಣವಾಗಿದೆ. ಆದುದರಿಂದಲೇ, ನಮ್ಮಲ್ಲಿ ಜನಪದೀಯವಾದುದು ಅತ್ಯಂತ ಶಿಷ್ಟವೂ ಹೌದೂ ಮತ್ತು ಅತ್ಯಂತ ಶಿಷ್ಟವಾದವುಗಳು ಜನಪದೀಯವಾಗಿಯೂ ಇರುವುದನ್ನು ಕಾಣಬಹುದಾಗಿದೆ. ಇದೆ ನಿಟ್ಟಿನಲ್ಲಿ "ರಾಮರಾಜ ಕ್ಷತ್ರಿಯ" ಸಮುದಾಯದ ಇತಿಹಾಸವನ್ನು ಅವಲೋಕಿಸುವಾಗಲೂ ನಾವು ಸಮಗ್ರ ಭಾರತದ ವಿವಿಧ ಪ್ರದೇಶಗಳ ಆಚರಣೆ, ನಂಬಿಕೆ, ಪದ್ಧತಿಗಳ ಜೊತೆಗೆ ನೋಡಬೇಕಾಗುತ್ತದೆ. ಈ ಸಮುದಾಯದ ಆಚರಣೆಗಳು ಶಿಷ್ಟವೂ ಹೌದು, ಜನಪದೀಯವೂ ಹೌದು.

''ರಾಮರಾಜ ಕ್ಷತ್ರಿಯ" ಸಮುದಾಯದ ಇತಿಹಾಸದ ಜಾಡನ್ನು ಒಂದು ಪ್ರದೇಶಕ್ಕೆ ಸೀಮಿತ ಮಾಡುವುದು ಸಾಧ್ಯವಿಲ್ಲ. ಏಕೆಂದರೆ, ಕೋಟೆಯ ರಕ್ಷಣೆಯ ಹೊಣೆ ಹೊತ್ತು ಸೈನ್ಯ ಸೇವೆ ನೀಡಿದ ಈ ಸಮುದಾಯದ ಹೆಜ್ಜೆ ಗುರುತುಗಳು ಈ ಭವ್ಯಭಾರತದ ಉದ್ದಗಲಕ್ಕೂ ಹರಡಿರಬಹುದು. ಎಲ್ಲೆಲ್ಲಿ ಯುದ್ಧಗಳು ನಡೆದವೊ, ಎಲ್ಲೆಲ್ಲಿ ಕೋಟೆ ಕೊತ್ತಲಗಳು ತಲೆಯೆತ್ತಿದವೂ, ಎಲ್ಲೆಲ್ಲಿ ಶಾಂತಿ ಸ್ಥಾಪನೆಯ ಅಗತ್ಯ ಬಂದಿತೊ ಅಲ್ಲೆಲ್ಲಾ ಈ ಸಮುದಾಯವನ್ನು ಕಳುಹಿಸಿ ಸ್ಥಿತಗೊಳಿಸಿದ್ದು ನಿರಂತರವಾಗಿ ನಡೆದು ಬಂದಿರುವಂತದ್ದು. ಹಾಗಿರುವಾಗ ಈ ಸಮುದಾಯವನ್ನು ಎಲ್ಲಿಯ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯ?

ಲಭ್ಯ ದಾಖಲೆಗಳು, ರಾಜರ ಕಾಲಘಟ್ಟಗಳ ಆಧಾರದಲ್ಲಿ ಇಂದು ಮಹಾರಾಷ್ಟ್ರವೇ ನಮ್ಮ ಮೂಲವೆಂದು ಹೇಳಿದ ಸಂಶೋಧಕರಿದ್ದಾರೆ, ತಜ್ಞರಿದ್ದಾರೆ. ಅದು ನಿಜವೂ ಹೌದು. ಏಕೆಂದರೆ, ನಮ್ಮಲ್ಲಿ ಅದಕ್ಕಿಂತಲು ಮುಂಚಿನ ಇತಿಹಾಸದ ಕುರುಹುಗಳು ಸಿಗುವುದೇ ಅನುಮಾನ. ಆದರೆ, ಕುರುಹು ಸಿಗದ ಮಾತ್ರಕ್ಕೆ ಇತಿಹಾಸ ಇರಲಿಲ್ಲವೆಂದಲ್ಲವಲ್ಲ, ಜೊತೆಗೆ ಉಹೆಯೂ ಕೂಡ ಇತಿಹಾಸವನ್ನು ಕಟ್ಟಿಕೊಡಲಾಗದು. ಆದರೆ, ಊಹೆ ಇತಿಹಾಸದ ಶೋಧಕ್ಕೆ ಪೂರಕ ಎನ್ನುವಂತೆ ನಮ್ಮ ವ್ರತ ನಿಯಮ ಅನುಷ್ಠಾನಗಳ ಆಧಾರದಲ್ಲಿ ಆನೇಕ ವಿಚಾರಗಳನ್ನು ಹೀಗಿರಬೇಕು ಎಂದು ಶೋಧಿಸುವುದಕ್ಕೆ ಶಕ್ತ.

ಮೂಲತಃ ವೈದಿಕ ವಿಧಿಗಳನ್ನು ಅನುಷ್ಠಾನ ಮಾಡುವ ಈ ಸಮುದಾಯ ತನ್ನ ಅತಿ ಪ್ರಾಚೀನ ನೆಲೆಯನ್ನು ಸರಸ್ವತಿ ನದಿಯ ತೀರದಲ್ಲೆ ಗುರುತಿಸಬೇಕು. ವೈದಿಕ ವಿಧಿಗಳನ್ನು ಅನುಷ್ಠಾನಿಸುವ ಅನೇಕ ಸಮುದಾಯಗಳ ಜೊತೆ ಒಂದು ಕೊಡುಕೊಳ್ಳುವಿಕೆ ಆ ಕಾಲಘಟ್ಟದಲ್ಲಿ ಆರಂಭವಾಗಿರಬೇಕು. ಶೈವಾರಾಧಕರು ಎನ್ನುವುದು ಇದನ್ನು ಇನ್ನಷ್ಟು ಪುಷ್ಟಿಕರಿಸುತ್ತದೆ. ವಿವಿಧ ರಾಜರುಗಳ ಕಾಲಘಟ್ಟದಲ್ಲಿ ಈ ಸಮುದಾಯ ದೇಶದ ಬೇರೆ ಬೇರೆ ಪ್ರದೇಶದ ಕಡೆಗೆ ಸೈನ್ಯಸೇವೆ ನೀಡಿರಬಹುದು, ವಿಶೇಷವೆಂದರೆ, ಆ ಸಂದರ್ಭಗಳಲ್ಲಿ ಈ ಸಮುದಾಯ 'ರಾಮರಾಜಕ್ಷತ್ರಿಯ' ಅಥವಾ 'ಕೋಟೆ' ಅನ್ನುವ ಹೆಸರನ್ನು ಹೊಂದಿರುವುದು ಸಾಧ್ಯವಿಲ್ಲ. ಜೊತೆಗೆ 'ನಾಯಕ', 'ರಾಯ'  'ರಾವ್',  'ಅಯ್ಯ' ಇಂತಹ ಉಪನಾಮಗಳು ಆಗ ಇದ್ದಿರಲೂ ಸಾಧ್ಯವಿಲ್ಲ.ಏಕೆಂದರೆ, ಇದೆಲ್ಲವೂ ವಿಜಯನಗರ, ಇಕ್ಕೇರಿ ಆಡಳಿತದ ಸಂದರ್ಭದಲ್ಲಿ ದೊರೆತಂದದ್ದು. ಹಾಗಾಗಿ ಮಹಾರಾಷ್ಟ್ರ, ಆಂಧ್ರ, ಕರ್ನಾಟಕದ ಭಾಗಗಳಿಗೆ ಬರುವ ಮುನ್ನ ಇದ್ದ ಉಪನಾಮಗಳು ಬೇರೆಯದ್ದೇ ಆಗಿದ್ದವು. 'ವರ್ಮ' ಎನ್ನುವ ಪದವೇ ಆಗ ಕ್ಷತ್ರಿಯರಲ್ಲಿ ಬಳಕೆ ಇದ್ದದ್ದು. ವರ್ಮ ಎಂದರೆ 'ಕವಚ'ಎನ್ನುವ ಅರ್ಥ ಹೊಂದಿದೆ. 'ಕ್ಷತಾತ್ ತ್ರಾಯತೆ ಇತಿ ಕ್ಷತ್ರಿಯ' ಎನ್ನುವಲ್ಲಿಗೆ ಕ್ಷತ್ರಿಯರೆಂದರೆ ಗಾಯದಿಂದ ರಕ್ಷಿಸುವವರು ಎಂದು ಅರ್ಥೈಸುತ್ತದೆ. ಆ ನೆಲೆಯಲ್ಲಿ ವರ್ಮ ಎಂದರೆ ಗಾಯ, ನೋವುಗಳನ್ನು ಕವಚದಂತೆ ತಡೆಯುವ ಕ್ಷತ್ರಿಯರು ಎಂಬುವುದು ವಿಧಿತ. ಹಾಗಾಗಿ ರಾಮರಾಜ ಕ್ಷತ್ರಿಯ/ಕೋಟೆ ಅನ್ನುವ ಪದಗಳ ಜೊತೆಗಿನ ಇತಿಹಾಸದ ಹುಡುಕಾಟ ನಮ್ಮನ್ನು ಮಹಾರಾಷ್ಟ್ರದ ಗಡಿಗಳ ಹತ್ತಿರಕ್ಕೆ ತಂದು ನಿಲ್ಲಿಸುತ್ತವೆ. 'ತಾಳಿಕೋಟೆ ಯುದ್ಧ' ಈ ನೆಲೆಯಲ್ಲಿ ಪ್ರಮುಖವಾದುದು. ನಂತರದ ಸಮಯದಲ್ಲಿ ಹುದ್ದೆಗಳೇ ಉಪನಾಮವಾದುದು (ಉದಾ: ಹವಲ್ದಾರ್, ಪಟೇಲ್) ಮತ್ತೂ ನಂತರದಲ್ಲಿ ನೆಲೆಯಾದ ಸ್ಥಳವೇ ಉಪನಾಮವಾದುದು ಕಾಣಬಹುದಾಗಿದೆ (ಉದಾ: ಬೇಕಲ್, ಮಲ್ಲಿಗೆಮಾಡು).

ಹೀಗೆ ಸಿಂಧೂ ನಾಗರೀಕತೆಯಿಂದ ಬಂಗಾಳದ ಕಡೆಗೆ ಮತ್ತು ಅಲ್ಲಿಂದ ಆಂಧ್ರ, ಮಹಾರಾಷ್ಟ್ರದ ಕಡೆಗೆ ಈ ಸಮುದಾಯವು ಬಂದಿರುವುದನ್ನು ನಾವು ಗುರುತಿಸಬಹುದು. ಶಿವನ ಜೊತೆಗೆ ಶಕ್ತಿಯ ಆರಾಧನೆಗೆ ಒಳಪಟ್ಟಿದ್ದು ಬಹುಶಃ ಶಕ್ತಿಯನ್ನು ಪ್ರಮುಖವಾಗಿ ಆರಾಧಿಸುವ ಬಂಗಾಳದ ಕಡೆಯಿಂದಲೇ ಆಗಿರಬಹುದು, ವಿಜಯ ನಗರದ ಅವರ ಆಡಳಿತದಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರದ ಕಡೆಗಳಲ್ಲಿ ಇದ್ದ ರಾಮಕ್ಷತ್ರಿಯ, ರಾಮರಾಜ ಕ್ಷತ್ರಿಯ, ಕೋಟೆಗಾ‌ರ್, ಕೋಟೆಯಾ‌ರ್, ಸೇರ್ವೆಗಾರ್, ಶೇರಿಗಾರ್, ಚೇರಕಾರ್ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಈ ಸಮುದಾಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ. ಕಾಸರಗೋಡು, ಕಾಞಂಗಾಡು ಪ್ರದೇಶದ ಕರಾವಳಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿದೆ.

ಸೈನ್ಯ, ಆಡಳಿತ, ರಕ್ಷಣೆ ವ್ಯವಸ್ಥೆಯಲ್ಲಿ ರಾಮಕ್ಷತ್ರಿಯರನ್ನು ನೇಮಿಸಿರುವುದು ತಿಳಿದಿರುವ ವಿಚಾರ, ರಾಜ್ಯ ರಕ್ಷಣೆಯ ಜೊತೆಗೆ ಕಡಲಿನ ಮೂಲಕ ನಡೆಯಬಹುದಾದ ದಾಳಿಗಳನ್ನು ತಪ್ಪಿಸಲು ವಿಶೇಷವಾಗಿ ಕರಾವಳಿಯ ಉದ್ದಗಲಕ್ಕೂ ಅಲ್ಲಲ್ಲಿ ಕೋಟೆಗಳನ್ನು ಕಟ್ಟಿ, ಕರಾವಳಿಯನ್ನು ದಾಳಿಕೋರರಿಂದ ರಕ್ಷಿಸಲು ಇಂದಿನ 'ತಟ ರಕ್ಷಣಾ ಪಡೆ' ರೀತಿಯಲ್ಲಿ ಆಗಿನ ಕಾಲದಲ್ಲಿ ರಾಮ ಕ್ಷತ್ರಿಯರು ವಿಶೇಷ ಪರಿಣತರು ಎಂದು ಊಹಿಸಬಹುದಾಗಿದೆ. ಹೀಗೆ ಕೋಟೆಗಳ ಕಾವಲು, ಆಡಳಿತ, ನಿರ್ವಹಣೆಯ ಹೊಣೆ ಹೊತ್ತ ರಾಮಕ್ಷತ್ರಿಯರು ಈ ಪ್ರದೇಶದ ಜನರ ಆಡುಭಾಷೆಯಲ್ಲಿ 'ಕೋಟೆಯವರು' ಎಂದು ಗುರುತಿಸಲ್ಪಟ್ಟರು. ರಾಮಕ್ಷತ್ರಿಯರ ಸಮುದಾಯದ ಆಚರಣೆ, ಭಾಷಾ ಶೈಲಿ ಹೆಚ್ಚಾಗಿ ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬಯಲು ಸೀಮೆಗೆ ಹೋಲಿಕೆ ಕಂಡುಬರುತ್ತದೆ. ಶಿವಮೊಗ್ಗದ ಭಾಗಗಳಲ್ಲಿ, ತೀರ್ಥಹಳ್ಳಿ ಮೊದಲಾದ ಕಡೆಯ ಜನಸಮುದಾಯ ಇಂದಿಗೂ ಮಾತನಾಡುವ ಭಾಷಾ ಶೈಲಿ ಈ ಸಮುದಾಯದ ಜೊತೆ ಹೋಲಿಕೆಯಾಗುತ್ತದೆ. ಹಾಗಾಗಿ, ವಿಜಯ ನಗರದ ಅಳಿಯ ರಾಮರಾಯನ ಆಳ್ವಿಕೆಯ ಪರತನಾನಂತರ ಈ ಸಮುದಾಯವು ಅವರ ಸಾಮಾಂತರಾದ ಇಕ್ಕೇರಿ ವಂಶದ ರಾಜರ ಅಧೀನಕ್ಕೆ ಬಂದು ಅವರ ಸ್ವತಂತ್ರ ಆಳ್ವಿಕೆಯ ಸಂದರ್ಭ ಒಂದು ಭಾಗ ಇಕ್ಕೇರಿಯ ಕಡೆಯಲ್ಲಿ ನೆಲೆಗೊಂಡು ನಂತರ (1586-1629) ಇಕ್ಕೇರಿಯ ಅರಸ ಹಿರಿಯ ವೆಂಕಟಪ್ಪ ನಾಯಕ ಸೈನ್ಯವನ್ನು ವಿಸ್ತರಿಸಿ ಚಂದ್ರಗಿರಿ, ಬೇಕಲ ಮುಂತಾದ ಕಡೆ, ರಾಜ್ಯವಿಸ್ತರಣೆ ಮಾಡಿ ಈ ಸಮುದಾಯವನ್ನು ಇಲ್ಲಿ ನೆಲೆಗೊಳಿಸಿದ್ದು ಇಂದಿಗೆ ಇತಿಹಾಸ.

ರಾಮರಾಜಕ್ಷತ್ರಿಯ ಕುಟಂಬಗಳು ಪಿತೃಪ್ರಧಾನ ವ್ಯವಸ್ಥೆಯಾಗಿದ್ದು, ಕುಲ, ಗೋತ್ರ ಪ್ರವರಗಳ ಚೌಕಟ್ಟಿನಲ್ಲಿ ಬೆಳೆದು ನಿಂತಿದೆ. ಗೋತ್ರಪ್ರವರ್ತಕರ ಗುರುಕುಲದಲ್ಲಿ ವಿದ್ಯಾದೀಕ್ಷತರಾದ ನಮ್ಮ ಪೂರ್ವರನ್ನು ಆನುಸರಿಸಿ ಆಯಾ ಗೋತ್ರದಲ್ಲಿ ಈ ಸಮುದಾಯದ ಕುಟುಂಬಗಳು ಮುಂದುವರೆದಿದೆ. ಕುಟಂಬ ದೇವರು ಮತ್ತೊಂದು ಪ್ರಮುಖ ವಿಷಯ, ಪ್ರತಿ ಕುಟುಂಬವು ತಮ್ಮ ಕುಟುಂಬಕ್ಕೆ ಪ್ರತ್ಯೇಕ ದೇವರುಗಳನ್ನು ಹೊಂದಿದ್ದು ತಮ್ಮ ಸೈನ್ಯ ಜಮಾವಣೆಯಾದ ಕಡೆಗೆಲ್ಲಾ ಕುಟುಂಬದ ದೇವರನ್ನು ಕೊಂಡೊಯ್ದು ನೇಮದಿಂದ ಪೂಜಿಸಿದ್ದಿದೆ.

ಶಿವ ಹಾಗೂ ಶಕ್ತಿಯ ಆರಾಧಕರಾದ ಕಾರಣ ಕುಟುಂಬ ದೇವರುಗಳು ಮೂಲತಃ ಶಿವ ಮತ್ತು ಶಕ್ತಿಯ ಹೆಸರಿನಿಂದಲೇ ಕಂಡು ಬರುತ್ತವೆ. ಕೆಲವೊಂದು ಕುಟುಂಬಗಳು ಮಾತ್ರ ವಿಷ್ಣುವಿನ ಆರಾಧನೆಯನ್ನು ಒಳಗೊಂಡಿದೆ. ಅದೂ ಕೂಡ ಜಿಜ್ಞಾಸೆಗೆ ಒಳಪಡುವಂತದ್ದಾಗಿದೆ. ಕುಲದೇವರ ಆರಾಧನೆಯನ್ನು ಕುಟುಂಬದ ಮುಖ್ಯ ವ್ಯಕ್ತಿ ಮತ್ತು ಮನೆಯಲ್ಲಿ ಆರಾಧನೆ ಮನೆಯ ಯಜಮಾನ ನಡೆಸುವುದು ಈ ಸಮುದಾಯದ ಕೌಟುಂಬಿಕ ವೈಶಿಷ್ಟ್ಯ. ಮದುವೆ ಮತ್ತು ಇತರ ಶುಭ ಸಮಾರಂಭವನ್ನು ಕುಲಪುರೋಹಿತರು ನಡೆಸಿಕೊಡುವುದು ಇರುವ ಕ್ರಮ. ಈ ನೆಲೆಯಲ್ಲಿ ಕರಾಹ್ಡ ಬ್ರಾಹ್ಮಣರು ನಮ್ಮ ಕುಲಪುರೋಹಿತರಾದದ್ದು ಈ ಸಮುದಾಯ ಮಹಾರಾಷ್ಟ್ರದ ಗಡಿಗಳಲ್ಲಿ ನೆಲೆ ನಿಂತ ಮೇಲೆಯ.

ಇಂದಿನ ಪರಿಸ್ಥಿತಿ:

ಬಹು ಮುಖ್ಯವಾದ ನಮ್ಮ ಸಮುದಾಯದ ಸಮಸ್ಯೆಯೆಂದರೆ, ಅದು, ವಿಸ್ಮೃತಿ. ನಾವು ಅನೇಕ ವಿಷಯಗಳನ್ನು ಮರೆತದ್ದು ನಮ್ಮ ದೊಡ್ಡ ಹಿನ್ನಡೆ, ಕೆಲವನ್ನು ಕಾಲ ಮರೆಸಿತು, ಕೆಲವನ್ನು ನಾವು ಸ್ವತಃ ಮರೆಯುತ್ತಾ ಹೋದವು, ಮಕ್ಕಳಿಗೆ ಕೆಲವನ್ನು ಹೇಳಿಕೊಡಲು ಮರೆತೆವು, ಹಾಗಾಗಿ ಮುಂದಿನ ಜನಾಂಗ ಕೆಲವನ್ನು ಅರಿತುಕೊಳ್ಳುವಲ್ಲಿ ಸೋತಿತು.

ನಮ್ಮ ಭಾಷೆ ಶೈಲಿ ಕಾಸರಗೋಡನಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದಂತೆ ಕೋಟೆ ಕನ್ನಡ ಮಂಗಳೂರು ಕನ್ನಡವಾಗಿ ಬದಲಾಯಿತು. ಹವ್ಯಕರು ಹವಿಗನ್ನಡವನ್ನು, ಗೌಡರು ಅರೆಭಾಷೆಯನ್ನು ಹೇಗೆ ಉಳಿಸಿದರೊ ಹಾಗೆ ನಾವು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಹೀಗಾಗಿ ಕೋಟೆ ಕನ್ನಡ ಅಳಿಯುವುದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ. 
ಎಲ್ಲಾ ಮನೆಯಲ್ಲೂ ನಮ್ಮ ಸಮುದಾಯದ ಕೆಲವು ಅತಿ ಪ್ರಮುಖ ಆಚರಣೆಗಳು ಕೈಯ್ದಾಗಿದೆ. ವಿಶೇಷವಾಗಿ ದೀಪಾವಳಿಯ ಆಚರಣೆ, ತುಳಸಿ ಹಬ್ಬದ ಆಚರಣೆ, ನಾಗರಪಂಚಮಿ, ವರ್ಷನೆಣೆ ಆಚರಣೆ ಮುಂತಾದವಲ್ಲಿ ಬಹುಮುಖ್ಯವಾದ ನಿಯಮಗಳನ್ನು ಕೈಬಿಡಲಾಗಿದೆ. ಮದುವೆಯ ಆಚರಣೆಯಲ್ಲೂ ಹೇರಳವಾಗಿ ಪ್ರಮುಖ ಆಚರಣೆಗಳನ್ನು ಕೈಬಿಡಲಾಗಿರುವುದು ವಿಷಾದನೀಯ.

ಸಂಘಟನಾತ್ಮಕವಾಗಿ ಅನೇಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಜಾತಿ ಸಂಘಗಳು ತಮ್ಮ ಶಕ್ತಿಮೀರಿ ಶ್ರೇಯೋಭಿವೃದ್ಧಿಗಾಗಿ ತೊಡಗಿವೆ. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾ‌ರ್ ಸೇವಾ ಸಂಘ ಬೀರಂತಬೈಲು ಕಾಸರಗೋಡು ಈ ಸಂಘ 90ನೇ ವಾರ್ಷಿಕ ಸಂಭ್ರಮದಲ್ಲಿ ಇರುವುದೇ ಇದಕ್ಕೆ ಸಾಕ್ಷಿ. ಆದರೆ, ಹೆಚ್ಚಿನ ಸಂಘಗಳು ತಮ್ಮ ವ್ಯಾಪ್ತಿಯ ಯುವ ಸಮುದಾಯವನ್ನು ಸೆಳೆಯುವಲ್ಲಿ ಹೆಣಗಾಡುತ್ತಿವೆ. ಮಂಗಳೂರಿನ ಕಡೆ ಬಂಟರ, ಬಿರುವೆರ ಯುವ ಸಂಘಗಳ ಬಲಿಷ್ಠತೆಯನ್ನು ನೋಡುವಾಗ ನಮ್ಮ ಸಮುದಾಯದಲ್ಲಿ ಯುವ ಸಂಘ ಹಿಂದೆ ಬಿದ್ದದ್ದು ಕಾಣಿಸುತ್ತದೆ. ಯುವ ಸಮುದಾಯ, ನಮ್ಮ ಸಮಾಜದ ಅಧ್ಯಯನ, ಸಂಶೋಧನೆ, ಪರಂಪರೆಯ ಅನಾವರಣ, ಪದ್ಧತಿಗಳ ಅನುಷ್ಠಾನ ಮತ್ತು ರಾಜಕೀಯವಾದ ಸಬಲತೆಯ ಕಡೆಗೆ ಒತ್ತು ಕೊಡದಿರುವುದನ್ನು ನಾವು ಕಾಣಬಹುದಾಗಿದೆ.

ನಿರೀಕ್ಷೆ:
ನಮ್ಮ ಸಮುದಾಯದ ಮುಂದೆ ಅನೇಕ ನಿರೀಕ್ಷೆಗಳು ಇವೆ. ರಾಜಕೀಯಾಗಿ ಸಾಮುದಾಯಿಕ ಹಕ್ಕೊತ್ತಾಯವನ್ನು ಮಾಡಬೇಕಾದದ್ದು ಬಹಳ ಪ್ರಮುಖವಾದುದು. ಕಡಿಮೆ ಸಂಖ್ಯೆಯಿರುವ ಸಮುದಾಯಗಳೂ ಕೂಡ  ತಮ್ಮ ಪ್ರಭಾವವನ್ನು ತೋರಿಸುತ್ತಿರುವುದನ್ನು ನೋಡುವಾಗ, ನಮ್ಮ ಸಮುದಾಯ ರಾಜಕೀಯದ ಪ್ರಭಾವಲಯದ ಪರಿಧಿಯಿಂದ ಕೊಂಚ ದೂರ ಉಳಿಯಿತುಎಂದು ಅನ್ನಿಸದಿರದು. ಈ ನಿಟ್ಟಿನಲ್ಲಿ ಪಡೆಯಬೇಕಾದ ಸೌಲಭ್ಯಗಳನ್ನು ಒಗಟ್ಟಿನಿಂದ ದಕ್ಕಿಸಿಕೊಳ್ಳುವ ಅಗತ್ಯವಿದೆ.

ಯುವ ಸಮುದಾಯವನ್ನು ಸಂಘಟನೆಯ ಕಡೆ ಕರೆತರುವ ಗುರುತರ ಜವಾಬ್ದಾರಿ ಇದೆ. ಇದು ಕೇವಲ ಭಜನಾ ಸಂಘಗಳಿಗೆ ಸೀಮಿತವಾಗದೆ ಇಂದಿನ ತುರ್ತುಗಳಾದ ವಿದ್ಯೆ, ಉದ್ಯೋಗ, ಕೌಶಲ್ಯ, ಸಾಮಾಜೀಕರಣ, ವಿವಾಹ ವೇದಿಕೆ ಮುಂತಾದವುಗಳನ್ನೂ ಒಳಗೊಂಡಿರಬೇಕು. ಯುವ ಸಮುದಾಯವು ಕೂಡ ತಮ್ಮ ಸ್ವ ಆಸಕ್ತಿಯಿಂದ ನಮ್ಮ ಸಮುದಾಯದ ನೆಲೆ, ಇತಿಹಾಸ, ಸ್ಥಿತಿಗತಿ, ಆಚರಣೆ, ಪದ್ಧತಿ, ಭಾಷಾ ವೈಶಿಷ್ಟ್ಯವೇ ಮೊದಲಾದವುಗಳ ಬಗ್ಗೆ ಸಂಶೋಧನೆ, ಅಧ್ಯಯನವನ್ನು ನಡೆಸಿ, ನಮ್ಮ ಸಮುದಾಯದ ತಜ್ಞರು, ವಿದ್ವಾಂಸರು, ಕವಿ, ಕಲಾವಿದರನ್ನು ಸಂದರ್ಶಿಸಿ ಅದರ ಹೂರಣವನ್ನು ಸಮುದಾಯದಲ್ಲಿ ದೊರಕುವಂತೆ ಮಾಡಬೇಕು.

ತಂತ್ರಜ್ಞಾನದ ಯುಗದಲ್ಲಿಯೂ ನಮ್ಮ ಸಮುದಾಯದ ಬಗ್ಗೆ ಆನ್ಲೈನ್ ಮಾಹಿತಿ ಹುಡುಕಿದರೂ ಹೆಚ್ಚೇನೂ ಮಾಹಿತಿ ಸಿಗುವುದೇ ಇಲ್ಲ. ಈ ನಿಟ್ಟಿನಲ್ಲಿ ಲೇಖನಗಳು, ಬಿಡಿ ಬರೆಹಗಳು, ಸಂವಾದಗಳು, ಸಂದರ್ಶನಗಳು ಜನಸಮುದಾಯವನ್ನು ತಲುಪುವಂತೆ ಮಾಡಬೇಕಿದೆ.

ಜೊತೆಗೆ ಈಗಾಗಲೇ ಸಮುದಾಯದಲ್ಲಿ ಗುರುತಿಸಲ್ಪಟ್ಟ ಹಿರಿಯರು ಯುವ ಸಮುದಾಯಕ್ಕೆ ಆಗಾಧ ಪ್ರೋತ್ಸಾಹ, ಜಾತಿ ಸಂಘಟನೆಗಳು ಆರ್ಥಿಕ, ಭಾವನಾತ್ಮಕ, ಮನೋಸಾಮಾಜಿಕ ನೆರವನ್ನು ಆನುಕೂಲವಿಲ್ಲದ ಮನೆಗಳನ್ನು ಗುರುತಿಸಿ ನೀಡಬೇಕು.

ಒಂದು ಪ್ರದೇಶದಲ್ಲಿ ನೆಲೆ ನಿಂತ ಒಂದು ಚೌಕಟ್ಟಿನಲ್ಲಿ ಬದುಕುವ ಜನಸಮುದಾಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯವಾಗಿ ಗಟ್ಟಿಗೊಳ್ಳಬೇಕಾದರೆ ಅದು ತನ್ನ ಪೂರ್ವ ಇತಿಹಾಸವನ್ನೂ, ಇಂದಿನ ತುರ್ತನ್ನೂ, ಮು೦ದಿನ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಸಿದ್ಧವಿರಬೇಕು. ಹೇಗೆ ಎದುರಿಸಬೇಕಾದರೆ ಅದಕ್ಕೆ ಪೂರಕವಾಗಿ  ಸಮುದಾಯ ತನ್ನ ಒಟ್ಟು ಸ್ವಬಾಂಧವರನ್ನು ಜೊತೆಯಾಗಿ ಕರೆದುಕೊಂಡು ಮುಂದೆ ಹೋಗಬೇಕಾಗುತ್ತದೆ. ತನ್ನ ಮತ್ತು ಕೇವಲ ತನ್ನದ್ದಷ್ಟೆ ನೋಡುವ ಯಾವ ಸಮುದಾಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ತನ್ನವರನ್ನು ಜೊತೆಗೆ ಸೇರಿಸಿ ಮುಂದುವರೆಯುವ ಮತ್ತು ತನ್ನವರಲ್ಲಿ ಯಾರೇ ಹಿಂದೆ ಬಿದ್ದರೂ ಅವರನ್ನು ಕೈಹಿಡಿದು ಮೇಲೆತ್ತುವ, ಪ್ರೋತ್ಸಾಹಿಸುವ ಸಮುದಾಯವು ಬಹಳ ಬೇಗ ಸಮಾಜದಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯವೂ ಕಾರ್ಯಪ್ರವ್ಯಕ್ರವಾಗಬೇಕಾದದ್ದು ಇಂದಿನ ತುರ್ತು.

(ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ (ರಿ) ಇದರ 90ನೇ ವಾರ್ಷಿಕ ಸಂಭ್ರಮ ಮಹಿಳಾ ಸಮಾವೇಶದಲ್ಲಿ ಮಂಡಿಸಿದ ವಿಷಯ)

Friday, 16 December 2022

ಅಬ್ಬ! ಮಲ್ಲಿಗೆ ಈ ಅಬ್ಬಲಿಗೆ

ಘಮವಿಲ್ಲದ ಅಬ್ಬಲಿಗೆಯೊಂದೂ ತನ್ನ ಬಣ್ಣದಿಂದಲೇ ಸೆಳೆಯಬೇಕಾದ್ದು ಅದರ ವಿಧಿಯೇನೊ. ಪರಿಮಳಿಸದ, ಸೇವಂತಿಯಂತೆ ಎಸಳೆಸಳಾಗಿರದ, ಕಾಕಡದಂತೆ ದಳವೊಡೆದ ಚೆಲುವಲ್ಲದ ಈ ಅಬ್ಬಲಿಗೆ ಅರೆದೆರೆದ ಹೂವಿನಂತೆ ಒಂದು ಪಾರ್ಶ್ವಕಷ್ಟೇ ಮೂರರಿಂದ ಐದು ದಳಗಳಾಗಿ ಅರಳುತ್ತದೆ. 
ಕೇಸರಿ, ಕಿತ್ತಳೆ ಮಿಶ್ರಿತ ಹಳದಿ, ನಸುನೀಲಿ, ಅಚ್ಚ ಹಳದಿ ಬಣ್ಣದ ಈ ಅಬ್ಬಲಿಗೆಯಲ್ಲಿ ಕೇಸರಿಗೆ ಬೇಡಿಕೆ ಹೆಚ್ಚು.

ಕ್ರೈಸ್ತ ಮದುಮಗಳ ತಲೆತುಂಬಾ ಜಾಲರಿಯಂತೆ ಇಳಿಬೀಳುವುದು ಇದೇ ಅಬ್ಬಲಿಗೆ. ಬಹಳ ಸುಕೋಮಲ ಹೂವಾದರಿಂದ ಸೇವಂತಿಗೆಯಂತೆ ಎಳೆದೆಳೆದು ಮೊಳ ಹಾಕುವ ಕ್ರಮವಿಲ್ಲ, ಇವಳನ್ನು ಮೊಳ ಹಾಕುವುದೇ ಬಹಳ ನಾಜೂಕಾಗಿ. ದುಬಾರಿ ಹಣಕೊಟ್ಟು ತಲೆಗೆ ಮುಡಿವ ಮಲ್ಲಿಗೆ ಘಮಘಮಘಮ ಪರಿಮಳ ಬೀರಿ ಹೆಂಗಸರ ತಲೆಯೇರಿ ಹೊದಲ್ಲಿ ತನಕ "ನಾನೇ ನಾನೇ" ಎಂದು ಸಾರುತ್ತ ಸಂಜೆಗಾಗುವಾಗ ಹೇಳ ಹೆಸರಿಲ್ಲದೆ ಹೆಂಗಸರ ತಲೆಗೆ ಬಾಳೆಯ ಸೊಟ್ಟ ನಾರನ್ನಷ್ಟೇ ಬಿಟ್ಟು ಕಣ್ಮರೆಯಾಗಿ ಹೆಂಗಸರಿಗೆ ಮಂಗ ಮಾಡುವ "ಮಲ್ಲಿಗೆ"ಯಂತಲ್ಲ ಈ ಅಬ್ಬಲಿಗೆ. ಈಕೆ ತನ್ನನ್ನು ತಾನು ಬಣ್ಣದಿಂದಲೇ ಪರಿಚಯಿಸಿ ಸಂಜೆವರೆಗೂ ಮುಡಿಶೋಭಿಸುವವಳು. 

ಸಂಜೆ ಮೇಲೆ ಬಸಲೆಯಂತೆ ಬಾಡುಬತ್ತಿಯಂತಾದರೂ ಮುಡಿದವಳ ತಲೆ ಬಿಡದೆ ತಲೆಗಾಯ್ವವಳು. ಒತ್ತಾಗಿ ಒಂದೇ ಬದಿಗೆ ಚೊಕ್ಕವಾಗಿ ಕಟ್ಟಿದರೆ ದಂಡೆಯಾಗುವವಳು, ಎರಡೂ ಬದಿಗೆ ಬಿಡಿ ಬಿಡಿಯಾಗಿ ಕಟ್ಟಿದರೆ ಕೃಷ್ಣನ ಕೊರಳ ಮಾಲೆಯಾಗುವವಳು. ಕೆಲವೊಮ್ಮೆ ಕಾಕಡದ ಮಾಲೆಯ ನಡುವೆ ಅಲ್ಲೊಂದು ಇಲ್ಲೊಂದು ಬಿಡಿ ಅಬ್ಬಲಿಗೆ ಕಾಕಡದ ಮಾಲೆಗೇ ಮೆರುಗು ತರುವುದಿದೆ. 

ಜಡೆಗೆ ಉದ್ದಕ್ಕೂ ಸುತ್ತಿದರೂ ಚೆಂದ, ಸೂಡಿಗೆ ಸುರುಳಿಯಾಗಿ ಸುತ್ತಿದರೂ ಚೆಂದ, ಪುಟ್ಟ ಹುಡುಗಿಯ ಎರಡು ಜಡೆಗಳ ನಡುವೆ ಸೇತುವೆಯಾಗಿ ಮುಡಿಸಿದರೂ ಚೆಂದ. "ಅಬ್ಬ ಮಲ್ಲಿಗೆ" ಎಂದೂ ಕರೆಯುವ ಇದು ಅಬ್ಬ! ಮಲ್ಲಿಗೆಯನ್ನೂ ಮೀರಿಸುವ ಚೆಲುವಿನ ಹೂವು ಹೌದು. ಕನಕಾಂಬರ ಎಂದೂ ಘಟ್ಟದ ಮೇಲೆ ಕರೆಯುತ್ತಾರೆ. 

ಇಷ್ಟೆಲ್ಲಾ ಇದ್ದರೂ ಈಗೀಗ ಅಬ್ಬಲಿಗೆ ಮುಡಿದ ಚಿನ್ನದಂತಹ ಜಡೆಯ ಹುಡುಗಿ ನಮ್ಮ ಕಡೆ ಕಾಣಸಿಗುವುದೇ ಅಪರೂಪದಲ್ಲಿ ಅಪರೂಪ

-ನಕ್ಷತ್ರಮೌನಿ

Thursday, 15 December 2022

ನೂರು ಎಸಳಿನ ಸೇವಂತಿಗೆ

ಆ ಹೂವಿನಂಗಡಿಯಲ್ಲಿ ಬಣ್ಣ ಬಣ್ಣದ ಸೇವಂತಿಗೆ ಇತ್ತು. ಕಾಮನಬಿಲ್ಲೇ ಹೂಮಾಲೆಯಾಯಿತೊ ಎನ್ನುವಂತೆ ಅಲ್ಲಿ ಹಲವು ಬಣ್ಣದ ಸೇವಂತಿಗೆ ಹೂಗಳನ್ನು ಒತ್ತಾಗಿ ಕಟ್ಟಿದ ಮಾಲೆಗಳೂ ಇದ್ದವು. ಹೂ ಮಾರುವ ಆ ಹೂವಾಡಿಗ ಪನ್ನೀರ ಸುರಿಸಿ ಆ ಹೂಗಳಿಗೆ ಘಮ ತುಂಬುತ್ತಿದ್ದಾನೊ ಅನ್ನುವಂತೆ ನೀರನ್ನು ಮಳೆಯಂತೆ ಚಿಮುಕಿಸುತ್ತಿದ್ದ. ಆ ನೀರಿನ ತಂಪು ಅಲ್ಲೆಲ್ಲಾ ತಂಪಾದ ಹವೆಯನ್ನು ಸೃಷ್ಟಿಸಿತ್ತು. ಆ ತಂಪು ಹವೆಗೆ ಗಾಳಿಯೂ ತಂಪಾಗಿ ಹೂವಿನ ಸೌಗಂಧವನ್ನು ಸೆಳೆದು ಆ ಅಂಗಡಿಯೇ ಪರಿಮಳದ ಮನೆಯಾಗಿತ್ತು. 

ಅಲ್ಲಿತ್ತು ಕಡುಗುಲಾಬಿ ಬಣ್ಣದ ಸೇವಂತಿಗೆಯ ಕುಚ್ಚು. ಬಿಟ್ರೋಟಿನಂತಹ ಬಣ್ಣ, ಬಿಳಿ ಸೇವಂತಿಗೆಯನ್ನೇ ನೆತ್ತರ ಕೆಂಪಿನಲಿ ಅದ್ದಿ ತೆಗೆದಿಟ್ಟಂತೆ. ಒಂದು ಅರೆ ನೀರಿನ ಪ್ಲಾಸ್ಟಿಕು ಬಾಲ್ದಿಯ ಒಳಗೆ ದಂಟು ಮುಳುಗಿಸಿ ಕಡುಗೆಂಪು ಮೃದು ಎಸಳ ಮೊಗವನ್ನು ಹೊರಚಾಚಿ ಗ್ರಾಹಕರೆಲ್ಲರೂ ತಮ್ಮೆಡೆಗೆ ಒಮ್ಮೆಯಾದರೂ ದೃಷ್ಟಿ ಹರಿಸುವಂತೆ ಆಕರ್ಷಿಸುವ ನಿರಂತರ ಪ್ರಯತ್ನದಲ್ಲಿದ್ದ ಕೆಂಪು ಗುಲಾಬಿಗಳ ಜೊತೆಗೆ ಸ್ಪರ್ಧೆಗಿಳಿದಂತಿತ್ತು ಈ ಕಡುಬಣ್ಣದ ಸೇವಂತಿಗೆಯ ವರಸೆ. ಎಸಳೆಸಳಾಗಿದ್ದ ಈ ಸೇವಂತಿಗೆಯ ನಡುನಾಭಿಗೆ ಹಳದಿಯ ಬೊಟ್ಟೊಂದನ್ನಿಟ್ಟಂತಿತ್ತು. 

ಘಮವಿಲ್ಲ, ಫಳಫಳಿಸುವ ಸೇವಂತಿಗೆಯೇ ಆದರೇನು, ಘಮವಿಲ್ಲ. ಲಲನೆಯರಿಗೆ ಘಮವಿಲ್ಲದ ಹೂವಿನ ಮೇಲೆ ಮೋಹ ಅಷ್ಟಕಷ್ಟೇ. ದಾಸವಾಳ, ಅಬ್ಬಲಿಗೆ ಮುಂತಾದವನ್ನು ನೋಡಿ ಹುಡುಗಿಯರ ಮುಡಿಯೇರುವುದೇ ಕಡಿಮೆ. ಮಲ್ಲಿಗೆ, ಸಂಪಿಗೆ, ರೋಜಾ ಇದಲ್ಲವೆ ಅವರಿಗೆ ಪ್ರೀತಿ. ಹಾಗೆ, ಘಮವಿಲ್ಲದ ಈ ಸೇವಂತಿಗೆಯೂ ಅವರ ಕೇಶ ಸಾನಿಧ್ಯದಲ್ಲಿ ವಿರಾಜಮಾನಳಾಗುವುದನ್ನೇ ಮರೆತಂತಿತ್ತು. ತಾನೇನಿದ್ದರೂ ಓಣಂ ಹಬ್ಬದ ಪೂಕಳಂಗೆ ಎಸಳೆಸಳಾಗಿ ಉದುರಿ ರಂಗೋಲಿಯಾಗಲೊ, ಬಸ್ಸು, ಆಟೋಗಳ ಅಲಂಕಾರಕ್ಕೆ ಮಾಲೆಯಾಗಲೊ, ದೀಪದ ಕಂಬಕ್ಕೆ ಲತೆಯಂತೆ ಬಳಸಿ, ದೀಪದ ಬುಡದಲ್ಲಿ ಉದುರು ಹೂವಿನ ಸಿಂಗಾರವಾಗಲೊ, ತಪ್ಪಿದರೆ ದೇವರ ಕೊರಳ ಮಾಲೆಯಾಗಿರಲು ಅಷ್ಟಕ್ಕೇ ಸೀಮಿತವಾದಂತೆ ಭಾವಿಸಿರುವಂತಿತ್ತು. ಘಮವಿಲ್ಲದ ಸೇವಂತಿಗೆಯಾದರೇನು,  ದಂಡೆಯಾಗಿಸಿ ಮುಡಿದರೆ ಹೂವಿಗಿಂತ ಮುಡಿಗೇ ಕಳೆ. 

ಈ ಹುಡುಗಿಯರಿಗಾದರೂ ಏನು ಗೊತ್ತು ನೂರು ಎಸಳ ಸೇವಂತಿಗೆಯ ಸೊಬಗು. ಮುಡಿದರೆ ತಲೆ ತುಂಬಾ ಹೂ ಜಾತ್ರೆಯಾಗುವ, ಜಡೆಗೆ ಚೆಂದಕೆ ಬಳಸಿ ಸುತ್ತಿದರೆ ಲತೆಯಪ್ಪಿದ ಕುಸುಮಕೇಶವಾಗುವ, ಒಂದೊಂದೆ ಬಿಡಿ ಹೂವನು ಜಡೆಯ ಅಡಿಯಿಂದ ಮುಡಿಗೆ ಸಾಲಾಗಿ ಇಟ್ಟರೆ ಜಡೆ ಬಿಲ್ಲೆಯಾಗುವ ಸೇವಂತಿಗೆಯ ಸೊಬಗನ್ನು ಈಗಿನ ನೀರೆಯರು ಬಲ್ಲರೆ? ಆ ನೂರು ಎಸಳ ಹೂ ಮುಡಿದರೆ ತಾವು ನಡೆದಲ್ಲಿಯವರೆಗೂ ಎಸಳುದುರಿಸಿ ತಮ್ಮ ದಾರಿಯುದ್ದಕ್ಕೂ ಹೂವಾಗಿಸುತ್ತವೆ. ಒತ್ತಾಗಿ ಕಟ್ಟಿ ದಂಡೆಯಾಗಿಸಿ ಮುಡಿದರೆ ಮುಡಿಗೆ ಹೂಬಿಲ್ಲಿನಂತೆ! 

ಆ ಅಂಗಡಿಯ ಎದುರು ನಿಂತು ಇಷ್ಟೆಲ್ಲ ಯೋಚಿಸುತ್ತಿರುವಾಗ ಹುಡುಗಿಯರ ಗುಂಪೊಂದು ಬಂದು ಕಡುಗೆಂಪು ಗುಲಾಬಿಗಳನ್ನು ಸಂಭ್ರಮದಲ್ಲಿ ಕೊಂಡು ಗುಲಾಬಿಯ ಕೆನ್ನೆಗಳನ್ನು ಸವರುತ್ತ ಮರೆಯಾದರು. ಸ್ಪರ್ಧೆಗೆ ಬಿದ್ದ ಘಮವಿಲ್ಲದ ಸೇವಂತಿಗೆ ಸೋತಿತಾ?? 

-ನಕ್ಷತ್ರಮೌನಿ

ಹೂವಿನಂಗಡಿಯ ಕಾಕಡ

ಆ ಹೂವಿನಂಗಡಿಯ ಕಟ್ಟೆಯ ಮೇಲೆ ಹರವಿದ ಬಾಳೆಯ ಎಲೆಯ ಮೇಗಡೆ ಸುರುಳಿ ಸುತ್ತಿಟ್ಟ ಕಾಕಡದ ಅಟ್ಟಿಯಿತ್ತು. ಹಸಿರೆಲೆಯ ಮೇಲೆ ಹಸಿರು ತೊಟ್ಟಿನ ಬಿಳಿ ಅರಳ ಕಾಕಡದ ಎಸಳಿನ ತುಂಬಾ ಅವನ ಬರುವಿಕೆಯ ನಿರೀಕ್ಷೆಯಿತ್ತು.  ಅಲ್ಲಿ ಸೇವಂತಿಗೆ, ಸುರಗಿ, ಗುಲಾಬಿ, ಮಲ್ಲಿಗೆ, ಅಬ್ಬಲಿಗೆಯ ಜಾತ್ರೆ ನೆರೆದಿದ್ದರೂ ಕಾಕಡ ಇಲ್ಲದೇ ಇರುತ್ತಿದ್ದರೆ ಆ ಸುಮಸದನಕೆ ಮೆರುಗೇ ಇರುತ್ತಿರಲಿಲ್ಲವೇನೊ ಅನ್ನುವಂತೆ ಕಾಕಡದ ಬೆಡಗು ಮೇಳೈಸಿತ್ತು. ಘಮಿಸುವ ಆ ತಣ್ಣನೆಯ ಪುಷ್ಪ ಸಾನ್ನಿಧ್ಯದಲ್ಲಿ ಸಾವಿರ ಹೂಕಂಪಿನ ಸೊಗಸು ಆವರಿಸಿತ್ತು. 

ಅವನು ಆ ಹೂವಿನಂಗಡಿಗೆಗೆ ಬಂದು ಅಲ್ಲಿದ್ದ ಹೂವುಗಳನ್ನು ಒಮ್ಮೆ ಕಣ್ಣಲ್ಲೇ ಪರಿಕಿಸಿದನು.  ಚೆಂಗುಲಾಬಿಯ ಎಸಳು ಥಳಥಳಿಸಿದ ನೀರಲ್ಲಿ ದಂಟು ನಿರುಕಿಸಿ ನಿಂತಿತ್ತು, ಬಾಳೆಯ ಎಲೆಯ ಒಳಗೆ ಮಲ್ಲಿಗೆಯ ಅಟ್ಟಿಯ ಕಟ್ಟಿತ್ತು, ಪರಿಮಳವಿಲ್ಲದ ಅಬ್ಬಲಿಗೆ ತನ್ನ ಬಣ್ಣದಲ್ಲೇ ಹೊಳೆದಿತ್ತು, ಸೇವಂತಿಗೆಗೆ ಮಳೆಬಿಲ್ಲಿನ ರಂಗಿತ್ತು. ನೋಡುತ್ತಿದ್ದವನ ಕಣ್ಣು ಕಾಕಡದ ಬಿಳಿ ಮೈಯ್ಯನ್ನು ಸವರಿತು. ಆಹ್! ಅವನ ಸ್ಪರ್ಶಕ್ಕೆ ಕಾಕಡದ ಜನ್ಮ ಪಾವನವಾಯ್ತು. ನಸು ನಾಚಿಗೆಯಲಿ ಕಾಕಡದ ಎಸಳ್ಗೆನ್ನೆ ಕೆಂಪಾಗ ಬೇಕಿತ್ತು ಆದರೆ, ತಾನು ನಸು ಕೆಂಪಾದರೂ "ಕಾಕಡ ಸೊರಗಿದೆ, ಬಾಡಿದ್ದಾ, ನಿನ್ನೆಯದ್ದಾ?" ಎಂದು ಆತ ಕೇಳಿದರೆ ಎಂಬಂತೆ ನಾಚಿಕೆಯ ತೋರಗೊಡದೆ  ತನ್ನ ಎಂದಿನ ಅಚ್ಚ ಬಿಳಿ ನಗುವ ನಕ್ಕಿತು ಹೂ ಕಾಕಡ. ಆ ನೂರು ಹೂ ಪರಿಮಳದ ನಡುವೆ ಕಾಕಡದ ತೆಳು ಸೌರಭ ಅಲ್ಲಿದ್ದ ಅವರಾರಿಗೂ ತಿಳಿಯಲ್ಲಿಲ್ಲವೇನೊ. 

ಅವನು ಕಾಕಡವನ್ನು ಹಾಗೆ ಸ್ಪರ್ಶಿಸುವುದಕ್ಕೂ, ಹೂವಾಡಿಗ ಆ ಕಾಕಡದ ಮಾಲೆಯನ್ನು ಕೈಯಲ್ಲಿ ಮೊಳ ಮಾಡಿ "ಕಾಕಡ ತೂಲೆ ಸರ್, ಫ್ರೆಶ್ ಉಂಡು, ನೂದೆತ್ತ ಕೊರೊಡಾ?" (ಕಾಕಡ ನೋಡಿ ಸರ್, ಫ್ರೆಶ್ ಉಂಟು, ನೂರರದ್ದು ಕೊಡುವುದಾ) ಎಂದು ಹೇಳುದಕ್ಕೂ ಸರಿ ಆಯಿತು. ಹೂವಾಡಿಗನ ಕೈಯಲ್ಲಿ  ಮೊಳ ಮೊಳದ ಮಾಲೆಯಾಗಿ ಹಸಿರ ತೊಟ್ಟ ಬಿಳಿ ಕಾಕಡ ಅವನ ಕೈಯನ್ನು ಸೇರಿತು. 

ಅವನ ಬೊಗಸೆಯಲ್ಲಿ ಕಾಕಡದ ಜನ್ಮ ಮತ್ತೊಮ್ಮೆ ಪಾವನವಾಯ್ತು! ಅವನು ಒಂದರೆ ಘಳಿಗೆ ಆ ಕಾಕಡವನ್ನೇ ದಿಟ್ಟಿಸಿದ, ಕಾಕಡದ ಮೊಗವನ್ನೇ ಬೊಗಸೆಯಲಿ ಹಿಡಿದನೊ ಎನ್ನುವ ಹಾಗೆ ಕಾಕಡದ ತೆಳು ಗಂಧದ ಉಸಿರು ಅವನ ತನಕ ತಲುಪಿತು.  ಎಲ್ಲಿಯೊ ಹುಟ್ಟಿದ ಕಾಕಾಡದ ಬಿಡಿ ಅರಳು ಇನ್ನೆಲ್ಲಿಯೊ ಒತ್ತೊತ್ತಾಗಿ ಸೇರಿ ಮಾಲೆಯಾಗಿ, ಎಲ್ಲಿಯೊ ಯಾವುದೊ ಹೂವಿನಂಗಡಿಯನು ಸೇರಿ ಹೀಗೆ ಈಗಿವನ ಕೈ ಬೊಗಸೆಯಲ್ಲಿ ಸೇರಿಕೊಳ್ಳುವುದೆಂದರೆ! ಅವನ ಕೈ ಸಾನಿಧ್ಯದಲ್ಲಿ ಹಾಗೆ ಅರೆಕ್ಷಣ ಇದ್ದುಬಿಡುವುದಕ್ಕೆಂದೆ ಅರಳಿದ್ದವೊ ಅನ್ನುವ ಹಾಗೆ, ಅದೊಂದು ಅನುಭೂತಿ. ಅವನಿಗಾದರೂ ಆ ತಿಳಿ ಹಸಿರು ಲಂಗದ ಬಿಳಿ ಕಾಕಡ ಒಂದು ಅನುಭೂತಿ. 

ನೀರು ಸಿಂಪಡಿಸುತ್ತಿದ್ದ ಆ ಮಘಮಘಿಸುವ ಸುಮತಾಣದ ತುಂಬಾ ತಂಪು ಕಂಪು. ಪಕ್ಕಕ್ಕೆ ತಿರುಗಿದ ಅವನು ಅವಳ ಕಡೆ ನಗು ಬೀರಿ ಬೊಗಸೆಯ ಕಾಕಡದ ಮೊಳವನ್ನು ದಂಡೆಯಾಗಿಸಿ ಅವಳ ಮುಡಿಯಲ್ಲಿ ಗಿಡಿದನು. ಅವನ ಕೈಯಾರೆ ಅವಳ ಮುಡಿಯೇರಿದ ಕಾಕಡ ಮತ್ತಷ್ಟು ಚೆಲುವಾಯಿತು. ಅವಳ‌ತಲೆಯೇರಿ ಅವನನ್ನೇ ದಿಟ್ಟಿಸಿತು ಕಾಕಡ, ಅವನ ಹೂ ತುಟಿಯ ನಗುವು ಕೂಡ ಕಾಕಡದ ಹಾಗೆಯೇ ಇತ್ತು ಎನ್ನುವುದು ಮಾತ್ರ ದಂಡೆಯ ಅಷ್ಟೂ ಬಿಡಿ ಕಾಕಡಗಳಿಗೂ ಅನ್ನಿಸಿತು!

-ನಕ್ಷತ್ರಮೌನಿ

Monday, 12 December 2022

ವಸ್ತ್ರ ಬತ್ತಳಿಕೆಯಲ್ಲಿ ಅವಳ ದುಪಟ್ಟಾಗಳು

ಅವಳು ಪ್ರತಿ ದಿನವೂ ಇದೇ ದಾರಿಯಲಿ ಬರುತ್ತಿದ್ದದ್ದು. ಹಾಗೆ ಆಕೆ ಬರುವ ಸರಿ ಹತ್ತು ನಿಮಿಷಕ್ಕೆ ಮೊದಲೇ ಅವಳ ಪ್ರತೀಕ್ಷೆಯಲ್ಲಿ ಕಾದು ನಿಲ್ಲುತ್ತಿದ್ದೆ. ಅವಳ ನೋಟಕ್ಕಲ್ಲ, ಅವಳ ಮಾಟಕ್ಕಲ್ಲ, ಅವಳ ಮಂದ ನಗುವಿಗಲ್ಲ, ಅಸಡ್ಡೆ ಮಾಡಿ ಕಂಡೂ ಕಾಣದಂತೆ ನಟಿಸಿ ಹೋಗುವ ವಾರೆಗಣ್ಣಿನ ತೇಲು ನೋಟಕ್ಕಂತೂ ಅಲ್ಲವೇ ಅಲ್ಲ. ನನ್ನ ನಿರೀಕ್ಷೆ ಏನಿದ್ದರೂ ಅವಳ ದುಪಟ್ಟಾದ ಬಣ್ಣವನ್ನು ನೋಡುವುದಕ್ಕೆ. 

ಅವಳೆಂದರೆ ಮಳೆಬಿಲ್ಲೇ ಹೆಣ್ಣಾಗಿ ಮೈದೆಳೆದಳೊ ಎನ್ನುವಂತೆ. ಅವಳೆಂದರೆ ಬಣ್ಣವದ್ದಿದ ಕುಂಚವೇ ಚಿತ್ರ ಬಿಡಿಸಿದಂತೆ.  ದಿನಕ್ಕೊಂದು ಬಣ್ಣದ ದುಪಟ್ಟಾದೊಂದಿಗೆ ಬೀದಿಗಿಳಿಯುತ್ತಾಳೆ. ಮೋಡ ಕಟ್ಟಿದ ಮುಂಜಾವಿಗೆ ಕೊಕ್ಕರೆಯಂತಹ ಅಚ್ಚ ಬಿಳಿಯ ಶಾಲು, ಮಂಜು ಕವಿದ ಮುಂಜಾವಿಗೆ ತಿಳಿ ಹಸಿರಿನ ವೇಲು, ರೋಜಾ ಹೂವಿನಂತಹ ಗೂಲಾಬಿ ಬಣ್ಣದ ಮೇಲು ಹೊದಿಕೆ ಕೆಲವೊಮ್ಮೆ, ಅವಳ ತುಟಿಯ ರಂಗನ್ನೂ ಮೀರಿಸುವ ಕಡುಗೆಂಪು, ಆಗಸದಿಂದ ಇಳಿಯುತ್ತಿರುವ ಅಪ್ಸರೆಯೊ ಎಂಬಂತಹ ಆಕಾಶ ನೀಲಿ, ಕೆನ್ನೇರಳೆ, ಕಡು ಹಸಿರು, ಹಳದಿ, ಕೇಸರಿ ಹೀಗೆ ಅವಳ ವಸ್ತ್ರ ಬತ್ತಳಿಕೆಯಲ್ಲಿ ಬಣ್ಣ ಬಣ್ಣದ ದುಪಟ್ಟಾಗಳು!

ನಾಳೆ ಅವಳ ಮೇಲೊದ್ದು ಯಾವ ಬಣ್ಣದ್ದು ಎಂದು ಊಹಿಸುವುದೇ ನನ್ನ ಪ್ರತಿದಿನದ ಕೊನೆಯ ಕೆಲಸ. ಮರುದಿನ ಹೆಚ್ಚಾಗಿ ನನ್ನ ಊಹೆಯೇ ಸರಿಯಾಗುತ್ತಿತ್ತು! ದಿನದ ವಾತಾವರಣದ ಮೇಲೆಯೇ ಆಕೆಯ ಬಣ್ಣದ ಆಯ್ಕೆ ನಡೆಯುತ್ತದೆಂದು ತೋರುತ್ತದೆ. ಹಾಗಾಗಿಯೆ ಬಹಳ ಸಲೀಸಾಗಿ ನಾನು ಊಹಿಸಿಬಿಡುತ್ತಿದ್ದೆ‌. 

ನನಗಂತೂ ಆ ಗುಲಾಬಿ ಬಣ್ಣದ ಶಾಲಿನ ಮೇಲೆ ಹೆಚ್ಚೇ ಆಕರ್ಷಣೆ. ಆಗಷ್ಟೇ ಅರಳಿದ ತೆಳು ಗುಲಾಬಿಯ ಎಸಳಿನ ಬಣ್ಣವನ್ನೆಲ್ಲಾ ಬಸಿದು ಆಕೆಯ ಶಾಲಿಗೆ ಅದ್ದಿರುವರೊ ಅನ್ನುವಂತೆ. ಅವಳ ಹಿಂದೆಯೇ ಶಾಲು ಉದ್ದಕ್ಕೆ ತೇಲಿ ಬರುತ್ತಿದ್ದರೆ ಗುಲಾಬಿ ಬಣ್ಣದ ರತ್ನಗಂಧಿಯ ಹೂವುಗಳೆ ದಾರಿಯುದ್ದಕ್ಕೃ ಚಲ್ಲಿರುವಂತೆ. 

ಅವಳ ವಸ್ತ್ರ ಭಂಡಾರದಲ್ಲಿರಬಹುದಾದ ಬಣ್ಣ ಬಣ್ಣದ ದುಪಟ್ಟಾಗಳನ್ನು ನಾನು ಲೆಕ್ಕ ಹಾಕಿ ಹಾಕಿಯೇ ಸೋತಿದ್ದೇನೆ ಯಾಕೆಂದರೆ ಅದಕ್ಕೆ ಹೊಸ ಹೊಸ ಬಣ್ಣಗಳ ದುಪಟ್ಟಾ ಸೇರುತ್ತಲೇ ಇರುತ್ತದೆ. 

ಯಾವ ಅಂಗಡಿ, ಯಾವ ಸಂತೆ, ಯಾವ ಮಾಲ್ ನಿಂದ ಇಷ್ಟು ಬಣ್ಣ ವೈವಿಧ್ಯವನ್ನು ಹೆಕ್ಕಿ ತರುತ್ತಾಳೊ, ಕೇಳೋಣವೆಂದುಕೊಂಡರೆ ಆಕೆಗೆ ನಾನು ಇಷ್ಟೆಲ್ಲಾ ಗಮನಿಸುತ್ತಿದ್ದೇನೆ ಅನ್ನುವ ಕಲ್ಪನೆಯೇ ಇಲ್ಲ. ಹಾಗಾಗಿ ಪ್ರತಿ ದಿನವೂ ಅವಳ ಬರುವಿಕೆಗೆ ಕಾದು ನಿಲ್ಲುತ್ತೇನೆ ಬಣ್ಣಗಣ್ಣಾಗಿ !! 

-ನಕ್ಷತ್ರಮೌನಿ

Saturday, 3 December 2022

ಶೈತ್ಯಕುವರ ಹಿಮಂತ

ಹೇಮಂತ ತನ್ನ ಪಾಳಿ ಹಚ್ಚಿದ್ದಾನೆ. ತಣ್ಣಗಿನ ಚಳಿಯ ಸೆಳಕೊಂದನ್ನು ಹಾಗೇ ಊರಿಡೀ ಹೊದ್ದಿಸುತ್ತಿದ್ದಾನೆ. ಮಾರ್ಗಶಿರ, ಪೌಷ ಮಾಸದಲಿ ಊರಿಡೀ ಅಲೆಯುತ್ತ ಕಚಗುಳಿಯಿಡುತ್ತಿದ್ದಾನೆ. ಆತ ಪೂರ್ಣ ಚಳಿಗಾಲವನ್ನು ತಂದವನಲ್ಲ, ಕೇವಲ ಚಳಿಯ ಒಂದು ಅನುಭವವನ್ನು ಹೌದೊ ಅಲ್ಲವೊ ಎಂದು ಕೊಡುತ್ತಾ ಕಣ್ಮರೆಯಾಗುವವನು. ಆತ ಚಳಿಗಾಲದ ಆರಂಭ. ಪೂರ್ಣವಾಗಿ ಬೆಳೆದು ನಿಲ್ಲದ ಪೂರ್ವ ಶೈತ್ಯ (Pre-Winter) ಕಾಲಘಟ್ಟದವನು. ಹಾಗಾಗಿಯೇ ಆತ ಶೈತ್ಯಕುವರ! ಆತ ಚಳಿಗಾಲದ ಹೊಸ್ತಿಲು!!

ಮುಂಜಾವುಗಳು ತಣ್ಪು ಹವೆಯ ಬೆಳ್ದೂಪ ಹಾಕಿದಂತಹ ಹೊಗೆ ಹೊಗೆಯ ಮಂಜು ಕಾವಣದ ಜಾಲರಿಯಂತೆ. ಮುಂಬಾಗಿಲ ತೆರೆದು ಹೊರ ಬಂದವರಿಗೆ ಶೀತಕ (Refrigerator) ದ ಬಾಗಿಲು ತೆರದಂತೆ ತಂಪು ತಂಪು. ತಟ್ ಪಟ್ ತಟ್ ಪಟ್ ಎಂದು ಅಲ್ಲಲ್ಲಿ ಬೀಳುವ ಇಬ್ಬನಿಯ ಸದ್ದು "ಹೀಮಂತ"ನೇ ಮಾತನಾಡಿದಂತೆ. ಅರಳುವ ಹೂವಿನ ಮೇಲೊ, ಗಿಡಬಳ್ಳಿಯ ಎಲೆಗಳ ಮೇಲೊ ಕೈ ಸೋಕಿದರೆ ನಮಗಿಂತ ಮೊದಲೇ ಹಿಮಂತ ಅವನ್ನೆಲ್ಲಾ ಸ್ಪರ್ಶಿಸಿ ಹೋಗಿರುತ್ತಾನೆ!! ಓ, ಹಿಮಂತ ಈ ಹೂವುಗಳ ಜೊತೆಗೂ ನಿನ್ನ ಚೆಲ್ಲಾಟವೇ!!!

ಮೇಲೆದ್ದು ಬರುವ ನಿಶಿತ ಸೂರ್ಯನ ಸುಡು ಧಗೆಗೆ ಮೆಲ್ಲಗೆ ಮರೆಯಾಗುತ್ತಾನೆ ಅವನು. ಈಗಿದ್ದ, ಇಲ್ಲೇ ಇದ್ದ. ಇಲ್ಲೆಲ್ಲ ತಂಪಿನದ್ದೊಂದು ಹಾಡು ಹಾಡಿದ ಹಾಗೆ, ಮೈಮನಸ್ಸಿಗೆ ಹಾಯೆನಿಸಿದ ಹಿಮಂತ ಮತ್ತೆ ಈಗಿಲ್ಲ, ಎಲ್ಲಿ ಹೋದನೊ ಅನ್ನುವಷ್ಟರಲ್ಲಿ ಸಂಜೆಯು ಪಶ್ಚಿಮದ ಕಡೆ ಇಳಿಯುತ್ತಿದ್ದಂತೆ ಹಾಜರಾಗುತ್ತಾನೆ. ಸಂಜೆಗೆ ಮೊದಲಾಗುವ ತಂಪು ಹವೆಯ ಆಹ್ಲಾದ ರಾತ್ರಿಯ ಹೊತ್ತಿಗೆ ಉತ್ಕಟವಾಗುತ್ತದೆ. ಕತ್ತಲಾಗುತ್ತಿದ್ದಂತೆ ಮಂಜುಹೊಗೆಯನ್ನು ಒಟ್ಟುತ್ತಾನೆ. ಬೀದಿ ದೀಪದ ಬೆಳಕಿಗೆ ಆ ಮಂದ ಬಿಳಿ ಹೊಗೆ ಬೆರೆಯುವುದು ಕಾಣಿಸುತ್ತದೆ. 

ನೀರವ ರಾತ್ರಿಗಳಲ್ಲಿ ಇಂತಹ ಶೀತಲ ಸಂಧ್ಯಾರಾಗ ದೇಹ ಮನಸ್ಸಿನ ತುಂಬಾ ಆವರಿಸುತ್ತಾ ಸಾಗುತ್ತದೆ. ಮನೆಯೊಳಗಿನ ಅಡುಗೆ ಒಲೆಯ ಬಿಸಿ, ಹಿತ್ತಲಿನ ನೀರೊಲೆಯ ನಿಗಿ ನಿಗಿ ಬೆಂಕಿ, ಒಟ್ಟು ಮಾಡಿದ ಜಿಗ್ಗಿಗೆ ಹೊತ್ತಿಸಿದ ಅಗ್ನಿಯ ಶಾಖೋತ್ಪನ್ನ ಹಿತವಾಗಿಸುತ್ತದೆ. ಬಿಸಿ ಬಿಸಿ ಅನ್ನಕ್ಕೊಂದಿಷ್ಟಿಷ್ಟೇ ಹಬೆಯಾಡುವ ಸಾರನ್ನು ಸುರಿ ಸುರಿದು ಉಂಡು ಕಿಟಕಿಯಿಂದ ಹೊರಗೆ ನೋಡಿದರೆ ತಣ್ಣಗೆ ಮಲಗುವ ಊರ ತುಂಬಾ ಹೇಮಂತಗಾನ. 

ಹೊದ್ದು ಮಲಗಿದರೆ ಹೊದಿಕೆಯ ಒಳಗೆಲ್ಲೊ ಹಿಮಂತನೇ ಸುಳಿದಂತೆ. ಹಿಮಂತನನ್ನು ಅಟ್ಟುತ್ತಾ ಹೊದಿಕೆಯನ್ನು ಮತ್ತಷ್ಟು ಹೊದ್ದು ಬೆಚ್ಚಗಿನ ಭಾವ ತರಲು ಯತ್ನಿಸುತ್ತ ಹೇಮಂತ ರಾಗದಲಿ ನಿದಿರೆಯೊಳಗದ್ದಿ ಮರೆಯುತ್ತೇವೆ. ಬೆಳಗ್ಗಿನ ಮೊದಲ ಜಾವಕ್ಕೆ ಎದ್ದು ನೋಡಿದರೆ ಹೊದಿಕೆಯ ಒಳಗೆಲ್ಲಾ ಹೇಮಂತನೇ ಅವರಿಸಿ ಅಪ್ಪಿಕೊಂಡಂತೆ. ಹೀಮಂತನೆಂದರೆ ಹೀಗೆ ರಾತ್ರಿಯ ಯಾವ ಹೊತ್ತಲ್ಲಿ ಹೇಗೆ ಆವರಿಸುತ್ತಾನೊ ತಿಳಿಯುವುದೇ ಇಲ್ಲ! 

ಹೀಗೆ ಶಿಶಿರನೆಂಬ ಶೈತ್ಯರಾಜನ ಆಗಮನಕ್ಕೂ ಮೊದಲೇ ಊರೆಲ್ಲಾ ಸುಳಿದಾಡಿ ಜನರಿಗೆ ಚಳಿಯದೊಂದು ಫೀಲ್ ಕೊಡುತ್ತಾ ಚಳಿಗಾಲಕ್ಕೆ ತಯಾರು ಮಾಡುತ್ತಾನೆ ಈ ಶೈತ್ಯಕುವರ- ಹಿಮಂತ!

-ಯೋಗೀಶ್ ಮಲ್ಲಿಗೆಮಾಡು