ಅವಳು ಪ್ರತಿ ದಿನವೂ ಇದೇ ದಾರಿಯಲಿ ಬರುತ್ತಿದ್ದದ್ದು. ಹಾಗೆ ಆಕೆ ಬರುವ ಸರಿ ಹತ್ತು ನಿಮಿಷಕ್ಕೆ ಮೊದಲೇ ಅವಳ ಪ್ರತೀಕ್ಷೆಯಲ್ಲಿ ಕಾದು ನಿಲ್ಲುತ್ತಿದ್ದೆ. ಅವಳ ನೋಟಕ್ಕಲ್ಲ, ಅವಳ ಮಾಟಕ್ಕಲ್ಲ, ಅವಳ ಮಂದ ನಗುವಿಗಲ್ಲ, ಅಸಡ್ಡೆ ಮಾಡಿ ಕಂಡೂ ಕಾಣದಂತೆ ನಟಿಸಿ ಹೋಗುವ ವಾರೆಗಣ್ಣಿನ ತೇಲು ನೋಟಕ್ಕಂತೂ ಅಲ್ಲವೇ ಅಲ್ಲ. ನನ್ನ ನಿರೀಕ್ಷೆ ಏನಿದ್ದರೂ ಅವಳ ದುಪಟ್ಟಾದ ಬಣ್ಣವನ್ನು ನೋಡುವುದಕ್ಕೆ.
ಅವಳೆಂದರೆ ಮಳೆಬಿಲ್ಲೇ ಹೆಣ್ಣಾಗಿ ಮೈದೆಳೆದಳೊ ಎನ್ನುವಂತೆ. ಅವಳೆಂದರೆ ಬಣ್ಣವದ್ದಿದ ಕುಂಚವೇ ಚಿತ್ರ ಬಿಡಿಸಿದಂತೆ. ದಿನಕ್ಕೊಂದು ಬಣ್ಣದ ದುಪಟ್ಟಾದೊಂದಿಗೆ ಬೀದಿಗಿಳಿಯುತ್ತಾಳೆ. ಮೋಡ ಕಟ್ಟಿದ ಮುಂಜಾವಿಗೆ ಕೊಕ್ಕರೆಯಂತಹ ಅಚ್ಚ ಬಿಳಿಯ ಶಾಲು, ಮಂಜು ಕವಿದ ಮುಂಜಾವಿಗೆ ತಿಳಿ ಹಸಿರಿನ ವೇಲು, ರೋಜಾ ಹೂವಿನಂತಹ ಗೂಲಾಬಿ ಬಣ್ಣದ ಮೇಲು ಹೊದಿಕೆ ಕೆಲವೊಮ್ಮೆ, ಅವಳ ತುಟಿಯ ರಂಗನ್ನೂ ಮೀರಿಸುವ ಕಡುಗೆಂಪು, ಆಗಸದಿಂದ ಇಳಿಯುತ್ತಿರುವ ಅಪ್ಸರೆಯೊ ಎಂಬಂತಹ ಆಕಾಶ ನೀಲಿ, ಕೆನ್ನೇರಳೆ, ಕಡು ಹಸಿರು, ಹಳದಿ, ಕೇಸರಿ ಹೀಗೆ ಅವಳ ವಸ್ತ್ರ ಬತ್ತಳಿಕೆಯಲ್ಲಿ ಬಣ್ಣ ಬಣ್ಣದ ದುಪಟ್ಟಾಗಳು!
ನಾಳೆ ಅವಳ ಮೇಲೊದ್ದು ಯಾವ ಬಣ್ಣದ್ದು ಎಂದು ಊಹಿಸುವುದೇ ನನ್ನ ಪ್ರತಿದಿನದ ಕೊನೆಯ ಕೆಲಸ. ಮರುದಿನ ಹೆಚ್ಚಾಗಿ ನನ್ನ ಊಹೆಯೇ ಸರಿಯಾಗುತ್ತಿತ್ತು! ದಿನದ ವಾತಾವರಣದ ಮೇಲೆಯೇ ಆಕೆಯ ಬಣ್ಣದ ಆಯ್ಕೆ ನಡೆಯುತ್ತದೆಂದು ತೋರುತ್ತದೆ. ಹಾಗಾಗಿಯೆ ಬಹಳ ಸಲೀಸಾಗಿ ನಾನು ಊಹಿಸಿಬಿಡುತ್ತಿದ್ದೆ.
ನನಗಂತೂ ಆ ಗುಲಾಬಿ ಬಣ್ಣದ ಶಾಲಿನ ಮೇಲೆ ಹೆಚ್ಚೇ ಆಕರ್ಷಣೆ. ಆಗಷ್ಟೇ ಅರಳಿದ ತೆಳು ಗುಲಾಬಿಯ ಎಸಳಿನ ಬಣ್ಣವನ್ನೆಲ್ಲಾ ಬಸಿದು ಆಕೆಯ ಶಾಲಿಗೆ ಅದ್ದಿರುವರೊ ಅನ್ನುವಂತೆ. ಅವಳ ಹಿಂದೆಯೇ ಶಾಲು ಉದ್ದಕ್ಕೆ ತೇಲಿ ಬರುತ್ತಿದ್ದರೆ ಗುಲಾಬಿ ಬಣ್ಣದ ರತ್ನಗಂಧಿಯ ಹೂವುಗಳೆ ದಾರಿಯುದ್ದಕ್ಕೃ ಚಲ್ಲಿರುವಂತೆ.
ಅವಳ ವಸ್ತ್ರ ಭಂಡಾರದಲ್ಲಿರಬಹುದಾದ ಬಣ್ಣ ಬಣ್ಣದ ದುಪಟ್ಟಾಗಳನ್ನು ನಾನು ಲೆಕ್ಕ ಹಾಕಿ ಹಾಕಿಯೇ ಸೋತಿದ್ದೇನೆ ಯಾಕೆಂದರೆ ಅದಕ್ಕೆ ಹೊಸ ಹೊಸ ಬಣ್ಣಗಳ ದುಪಟ್ಟಾ ಸೇರುತ್ತಲೇ ಇರುತ್ತದೆ.
ಯಾವ ಅಂಗಡಿ, ಯಾವ ಸಂತೆ, ಯಾವ ಮಾಲ್ ನಿಂದ ಇಷ್ಟು ಬಣ್ಣ ವೈವಿಧ್ಯವನ್ನು ಹೆಕ್ಕಿ ತರುತ್ತಾಳೊ, ಕೇಳೋಣವೆಂದುಕೊಂಡರೆ ಆಕೆಗೆ ನಾನು ಇಷ್ಟೆಲ್ಲಾ ಗಮನಿಸುತ್ತಿದ್ದೇನೆ ಅನ್ನುವ ಕಲ್ಪನೆಯೇ ಇಲ್ಲ. ಹಾಗಾಗಿ ಪ್ರತಿ ದಿನವೂ ಅವಳ ಬರುವಿಕೆಗೆ ಕಾದು ನಿಲ್ಲುತ್ತೇನೆ ಬಣ್ಣಗಣ್ಣಾಗಿ !!
No comments:
Post a Comment
Note: only a member of this blog may post a comment.