Saturday, 30 September 2023

ಪ್ರೇಮ ಎಂದರೆ ಸಿಗದಿರುವ ಕವಿತೆಯ ಸಾಲು

ಅವರಿಬ್ಬರೂ ಅಮರ ಪ್ರೇಮಿಗಳು ಒಂದಾಗದೆ ಉಳಿದುಬಿಟ್ಟರು, ಪ್ರೇಮಿಸಿದ ಅವರಿಬ್ಬರನ್ನೂ ಶಾಶ್ವತ ವಿರಹ ಕಾಡಿತು, ಮತ್ತೆಂದೂ ಅವರು ಒಂದಾಗಲೇ ಇಲ್ಲ, ಈ ಸಾಲುಗಳನ್ನೆಲ್ಲಾ ಕೇಳಿದಾಗ ಎದೆಯೊಳಗೊಂದು ಸಂಕಟದ ಸೆಳಕು ಮೂಡಿಬಿಡುತ್ತದೆ. ಯಾರಿಗಾಗಿಯೊ ಕಣ್ ತುಂಬಿ ಮಿಡಿಯುತ್ತದೆ. ದೇವರಂತಹ ದೇವರೂ ತಥಾಸ್ತು ಅಂದಿದ್ದರೆ ಪ್ರೇಮ ಫಲಿಸುತ್ತಿತ್ತೇನೊ ಅನ್ನಿಸುತ್ತದೆ. ಆದರೆ, ಪ್ರೇಮ ಎಂದರೆ ಉತ್ಕಟ ಭಾವತೀವ್ರತೆಯಿಂದ ಬಯಸಿದ್ದನ್ನು ಪಡೆಯುವುದಾ? ನನ್ನದು ಅನ್ನುವ ಭಾವದಿಂದ ಅದು ನನ್ನದೇ ಆಗಿ ಉಳಿಯಲಿ ಅನ್ನುವುದಾ? ಇಬ್ಬರೂ ಜೊತೆಯಾಗಿ ಸುಖಾಂತ್ಯ ಕಾಣುವ ಸಂಭ್ರಮವಾ? ಒಂದಾಗದೆ ಉಳಿದು ಹೋಗುವ ಹೂ ಗುಲಾಬಿಯಂತಹ ಚೆಂದ ಚೆಂದದ ಪ್ರೇಮಿಗಳದ್ದು ವಿಫಲ ಪ್ರೇಮವಾ?

ಪ್ರೇಮ ದಕ್ಕಿಸಿಕೊಳ್ಳುವುದಲ್ಲ, ಒದಗಿ ಬರುವುದು. ಒದಗದೆ ಉಳಿದಾಗ ಧಾರಾಳವಾಗಿ ತೊರೆದು ಬರುವುದು. ಪ್ರೇಮ ಎಂದರೆ ಸಿಗದಿರುವ ಕವಿತೆಯ ಸಾಲನ್ನು ಸುಮಧುರವಾಗಿ ಗುನುಗುನಿಸಿ ಎದ್ದು ಬರುವುದು. ಪ್ರೇಮ ಎಂದರೆ ಫಲಿಸದಾಗಲೂ ಅದಕ್ಕೆ ಹೂಮಳೆಯ ಅಕ್ಷತೆ ಹಾಕಿ ಹರಸಿ ಬರುವುದು.

ಪ್ರೇಮವೆಲ್ಲವೂ ಫಲಿಸುವುದಿಲ್ಲ, ಅದೆಷ್ಟೋ ಎದೆಕಾವ್ಯದ ಹಾಡು ಪಯಣದ ನಡುವೆಯೆ ಮರೆಯಾಗುತ್ತದೆ. ಮನೆಯಂಗಳದ ಹೂವೊಂದನ್ನ ಯಾರೊ ಯಾವುದೊ ಹೊತ್ತಲ್ಲಿ ಕೊಯ್ದು ಹೋದಂತೆ, ಜೊತೆ ನಡೆದವರು ಹೇಳದೆ ಕೇಳದೆ ಪಥ ಬದಲಾಯಿಸಿದ ಹಾಗೆ ಖಾಲಿತನವನ್ನು ಬಿಟ್ಟು ತೆರಳುತ್ತಾರೆ. ಪ್ರೇಮಲೋಕದಲ್ಲಿ ಸೂತಕ ಆವರಿಸುತ್ತದೆ. 

ಆಗ ಎದ್ದು ಬರಬೇಕು, ಅಮೃತದಂತಹ ಪ್ರೇಮವೇ ಮೈತುಂಬಾ ನಂಜಾಗಿ ಹಿಂಡಿ ಹಿಪ್ಪೆ ಮಾಡುವ ಹೊತ್ತಿಗೆ, ಎದೆಯಲ್ಲೊಂದು ಶೋಕ ಪುಷ್ಪವಿಟ್ಟು ವಿವೇಕದ ಮಾತನ್ನಾಲಿಸಿ ಎದ್ದು ಬರಬೇಕು. ಮುಖದಲ್ಲೊಂದು ಹುಸಿ ನಗೆಯೇ ಸರಿ ಆದರೆ ಎದೆಯೊಳಗೊಂದು ಭರವಸೆಯ ದೀಪ ಹಚ್ಚಿ ದಾರಿ ಸವೆಸಬೇಕು. 

ತ್ಯಾಗ ಪ್ರೀತಿಯ ಅತ್ಯುನ್ನತ ಪೂಜೆ! ಕಟುವಾಗಿ ಮಾತನಾಡುವುದಲ್ಲ, ದೂರುವುದಲ್ಲ, ನೋವಿನ ಮೊನಚು ಮಾತನ್ನೆಸೆಯುವುದಲ್ಲ, ಹೆದರಿಸುವುದಲ್ಲ, ಬೆದರಿಸುವುದಲ್ಲ, ಎಳೆದಾಡುವುದು, ಅವಮಾನಿಸುವುದು, ಘನತೆರಹಿತವಾಗಿ ವರ್ತಿಸುವುದೂ ಅಲ್ಲ. ತ್ಯಾಗ ಮಾಡಿ ಎದ್ದು ಬರುವುದು.

ಬದುಕಿನಲಿ ಸಂಧಿಸುವುದು ಎಷ್ಟು ಸತ್ಯವೊ ಅಗಲಿ ದೂರವಾಗುವುದು ಅಷ್ಟೇ ಸತ್ಯ ಅದನ್ನು ಒಪ್ಪಿಕೊಳ್ಳದೆ ಬೇರೆ ನಿರ್ವಾಹವಿಲ್ಲ. ದಕ್ಕದ ಪ್ರೇಮವನ್ನು ತ್ಯಾಗ ಮಾಡುವ ಗುಣ ದೊಡ್ಡದು. ಪ್ರೀತಿಸಿದವರು ನಮ್ಮವರಾಗಲಿಲ್ಲ ಎನ್ನುವ ದುಃಖಕ್ಕಿಂತ ನಾವು ಪ್ರೀತಿಸಿದವರ ಬಾಳು ಬಂಗಾರವಾಗಲಿ ಎಂದು ಆಶಿಸುವುದು ಪ್ರಬುದ್ಧತೆ ಅಲ್ಲವಾ? ಅದಲ್ಲವೆ ನಮ್ಮ ಪ್ರೀತಿಯ ರೀತಿ?

ಬದುಕು ಬಂಗಾರವಾಗುವುದು ಬಲಾಢ್ಯತೆಯಲ್ಲಿ ಅಲ್ಲ ಗಟ್ಟಿತನದಲ್ಲಿ, ಗೆಲ್ಲುವುದರಲ್ಲಿ ಅಲ್ಲ ಸೋತು ಗೆಲ್ಲುವುದರಲ್ಲಿ. ಕೆ ಎಸ್ ನರಸಿಂಹಸ್ವಾಮಿ ಅವರ ದಕ್ಕದ ನೀಲಾಳಿಗಾಗಿ ಅವಳ ಪ್ರಿಯತಮ ಹೇಳುವುದನ್ನು ಅದೆಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ಗೊತ್ತಾ, "ನೀಲಾಳಿಗೆ ನನ್ನ ಕನಸೂ ಸಹ ಬೀಳುವುದು ಬೇಡ, ಹಾಲುಂಡು ಹೂ ಮುಡಿದು, ಸುಖವಾಗಿರಲಿ"
ಇದಾಗ ಬೇಕು ನಮ್ಮ ಪ್ರೀತಿಯ ನೀತಿ.

ಮಿಂಚೊ, ಗುಡುಗೊ, ಕತ್ತಲೊ, ಮಳೆಯೊ, ಬಿರುಗಾಳಿಯೊ, ಅಲೆಯೊ, ಹೆದ್ದೆರೆಗಳೊ ನಮ್ಮ ಬದುಕಿನ ನಾವೆ ಮಾತ್ರ ದಿಕ್ಕೆಡದೆ ಶಾಂತವಾಗಿ ದಡ ಸೇರಲಿ‌‌.

#ನಕ್ಷತ್ರಮೌನಿ

Sunday, 17 September 2023

ಹೇಳದೆ ಹೋಗಿ ಬಿಡುವ ನೋವು ಸದಾ ಕಾಲಕ್ಕೂ ಉಳಿದು ಬಿಡುವ ಈತಿಬಾಧೆ.

ಯಾರೂ ಬೇಕಾಗಿಲ್ಲ ಎನ್ನುವ ನಿರ್ಲಿಪ್ತ, ನಿಶಾಂತ ಆಪ್ಯಾಯಮಾನ ನಸುಗತ್ತಲ ಬದುಕಿಗೆ ಕಿಟಕಿಯೊಳಗೆ ಇಣುಕುವ ಬೆಳ್ಳನೆ ಬೆಳಕಿನ ಹಾಗೆ ಅದ್ಯಾರೊ ಅದೆಲ್ಲಿಂದಲೋ ಗೊತ್ತು ಗುರಿಯಿಲ್ಲದೆ ಬಂದು ಬಿಡುತ್ತಾರೆ. ಯಾಕೆ ಬಂದರೊ, ಇವರೇಕೆ ಹೀಗೆ ಹಿಂದೆ ಬೀಳುತ್ತಿದ್ದಾರೆ, ಇವರಿಗೆ ಈ ಲೋಕದಲ್ಲಿ ಬೇರೆ ಯಾರೂ ಇಲ್ಲವಾ ಎಂದೆಲ್ಲಾ ಯೋಚಿಸುವಷ್ಟರಲ್ಲಿ ಅವರ ಕಾಳಜಿ, ಮಾತು, ನಗು ಇಷ್ಟವಾಗತೊಡಗುತ್ತದೆ. ಹೊರಗೆ ನೋಡಿದರೆ ಎಂದಿನ ತೋಟದಲಿ ಹೊಸ ಬಣ್ಣದ ಹೂವು, ಅದೇ ಮರದಲ್ಲಿ ಹಾಡುವ ಅದೇ ಹಕ್ಕಿಯ ದನಿಯಲ್ಲಿ ಹೊಸ ಸಂಗೀತ, ಟೇಬಲಿನಲ್ಲಿನ ಪುಸ್ತಕದಲ್ಲಿ ಪೆನ್ನು ಅರಿವಿಲ್ಲದೆ ಅವರ ಹೆಸರು ಬರೆಯತೊಡಗಿದೆ! 

ಬೆಳಗಿನಿಂದ ರಾತ್ರಿಯವರೆಗೆ ಮೊಬೈಲಿನ ತುಂಬಾ ಅವರದೇ‌ ಆದ ಧಾಟಿಯಲ್ಲಿ ಮೆಸೆಜುಗಳ ಮಾತುಕತೆ. ಆ ಧಾಟಿಗೆ, ಅದನ್ನು ಓದುವ ಓಘಕ್ಕೆ ಮನಸ್ಸು ಒಗ್ಗಿಕೊಳ್ಳತೊಡಗುತ್ತದೆ. ಓದುವಾಗೆಲ್ಲಾ ಅವರದೇ ದನಿ ಮತ್ತು ಶೈಲಿಯಲ್ಲೇ ಓದ ತೊಡಗುತ್ತದೆ ಮನಸ್ಸು! ಆಹಾ!! ಇದೇನು, ಹೀಗೇಕೆ ಎಂದೆಲ್ಲಾ ತಿಳಿಯುವಷ್ಟರಲ್ಲಿ ಅವರ ಭೇಟಿ ಸುಖಾಸುಮ್ಮನೆ ಖುಷಿ ಕೊಡತೊಗುತ್ತದೆ. ಒಂದು ಲಾಂಗ್ ರೈಡ್, ಅದ್ಯಾವುದೋ ದೇವಸ್ಥಾನದ ಕಟ್ಟೆ, ಇನ್ನೆಲ್ಲಿಯದೊ ಸಂಜೆ ಕರಗುವ ಬೆಟ್ಟ, ಬೆಳದಿಂಗಳ ಹಾಲು ಬೆಳಕಿನ ಹೊಳೆ ಎಲ್ಲವೂ ಇವರಿಂದಲೇ ಇಷ್ಟು ಸೊಗಸೊ ಅಥವಾ ಸೊಗಸಿರುವ ಜಾಗೆಗಳಿಗೆ ನಾವು ಜೊತೆಯಾಗಿ ಬಂದೆವೊ ತಿಳಿಯದಾಗುತ್ತದೆ.

ದಿನ ಶುರುವಾಗುವುದು ಅದೇ ಮೆಸೆಜಿನಿಂದ, ಒಂದು ಇಮೋಜಿಗೆ ಇಡೀ ದಿನದ ಉಲ್ಲಾಸ ಮೂಡಿಸುವ ತಾಕತ್ತು ಇದೆ ಎಂದು ಅವರ ಮೆಸೆಜಿನಿಂದಲೇ ತಿಳಿದಿದ್ದು. ಕನಸುಗಳು ಯಾಕೊ ಈಗ ಅವರ ಸುತ್ತವೇ ಮೊಳೆಯ ತೊಡಗಿದೆ ಅನ್ನಿಸುತ್ತದೆ. ಬದುಕಿನ ಮುಂದಿನ ಪಯಣಕ್ಕೆ ಯಾರೊ ಜೊತೆಗಿರುವಂತೆ, ಇನ್ನೇನಿದ್ದರೂ ಅವರನ್ನು ಹೊರತುಪಡಿಸಿ ಯಾವುದನ್ನೂ ನಿರ್ಣಯಿಸಲಾರೆ ಎನ್ನುವಂತೆ. 

ಪ್ರೀತಿ ಎಂದರೆ ಹಬ್ಬ! ಪ್ರೀತಿ ಎಂದರೆ ಸಂಭ್ರಮ!! ಪ್ರೀತಿ ಎಂದರೆ ನೀನು!!! 
 ಹೀಗೆ ಕಳುಹಿಸಿದರೆ ಅಲ್ಲೆಲ್ಲೊ ಜಾತ್ರೆಯಂತಹ‌ ಸಂಭ್ರಮ! ಅವರು ಹಾಗೆ ಕಳಿಸಿದ್ದಾದರೆ ಎದೆಯೊಳಗೆ ನದಿ ಹರಿದಂತೆ. ಗುಪ್ತಗಾಮಿನಿ!!
 
ಕಿಟಕಿಯಿಂದ ಇಣುಕಿದ ಬೆಳಕಷ್ಟೇ ಅಲ್ಲ ಇದು, ಬದುಕಿನ ಪೂರ್ತಿ ಹಬ್ಬಿಕೊಂಡ ಸೂರ್ಯಪ್ರಭೆ. ಇನ್ನು ಈ ಬಾಳಲಿ ಸದಾ ಹೊಂಬೆಳಕಿನದ್ದೇ ಫಳ ಫಳಿಸುವ ಬೆಳಕಿರಲಿದೆ ಎಂದು ಮನಸ್ಸು ಒಪ್ಪ ತೊಡಗುತ್ತದೆ. ಹೌದಾ? ನಿಜವೇ? ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿದರೂ ಹೌದೂ ಇದಿನ್ನು ಶಾಶ್ವತ ಪ್ರೀತಿ ಎನ್ನಲು ಸಾವಿರ ಕಾರಣಗಳಿರುತ್ತದೆ. ಅವರು ಕಳುಹಿಸಿದ ಹೂನಗೆಯ ಇಮೋಜಿಯಿಂದ ಹಿಡಿದು ದೇವಸ್ಥಾನದಲ್ಲಿ ಹಣೆಗೆ ಹಚ್ಚಿದ ಪ್ರಸಾದದ ತನಕ ಸಾವಿರ ಸಾಕ್ಷಿ ಕೊಡಬಲ್ಲೆ ಎನ್ನುತ್ತದೆ ಪ್ರಶ್ನೆ ಕೇಳಿದ ಅದೇ ಮನಸ್ಸು!!

ಆದರೆ, ಆದರೆ ಈಗೇಕೊ ಮೊದಲಿನಂತಿಲ್ಲ, 
ಪ್ರೀತಿ ಎಂದರೆ ಹಬ್ಬ! ಪ್ರೀತಿ ಎಂದರೆ ಸಂಭ್ರಮ!! ಪ್ರೀತಿ ಎಂದರೆ ನೀನು!!! 
ಸಾವಿರ ಸಲಿ ಹೇಳಿದ ಇದೇ ಸಾಲುಗಳನ್ನು ಈಗ ಕಳುಹಿಸಿದರೆ ಯಾಕೊ ಮೊದಲಿನ ಭಾವತೀವ್ರತೆ ಕಾಣಿಸಿದಂತೆ ಇಲ್ಲ. ಯಾಕೆ ಹೀಗೆ? ಕೇಳಲಾಗದು, ಕೇಳಿದರೆ ತಪ್ಪಾದೀತಾ?? 
ಮೆಸೆಜು ಕಳುಹಿಸಿ ಅರ್ಧಗಂಟೆ ಮರುತ್ತರಕ್ಕೆ! ಯಾವುದೊ ಒತ್ತಡ, ಬ್ಯುಸಿ ಇದ್ದೆ ಅನ್ನುವ ಒಂದು ಢಾಳಾದ ಸಂದೇಶ. ಕೈಯಲ್ಲೆ ಮೊಬೈಲ್ ಇತ್ತಲ್ಲವೆ? 
ಯಾಕೆ ಹೀಗೆ? ಕೇಳಲಾಗದು, ಕೇಳಿದರೆ ತಪ್ಪಾದೀತಾ??

ಸಿಗಬಹುದೆ? 
"ಇಲ್ಲ, ಈ ವಾರ ಆಗುವುದಿಲ್ಲ".
 ಫೋನಿಗೆ ಸಿಗಲೊಲ್ಲರು, ಮೆಸೆಜುಗಳಲ್ಲಿ ಜೀವಂತಿಕೆ ಇಲ್ಲ, ಇರುವ ಶಬ್ಧಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು. 
ಎದೆಯೊಳಗೆ ಇದೇನೊ ನೋವಿನ ಸೆಳಕಿದೆ. ಹೇಳಿಕೊಂಡರೆ, "ಹಾಗೇನಿಲ್ಲ ನೀನು ಯಾಕೊ ಈಗೀಗ ಸುಮ್ಮನೆ ಒದ್ದಾಡುತ್ತೀಯಾ ಅನ್ನುವ ಹಾರಿಕೆಯ ಉತ್ತರ".

ಹಾ! ಆದೊಂದು ದಿನ ಇನ್ನು ಸಹಿಸಲಾಗದು ಎಂದು ಎದ್ದೋಡಿ ಅವರ ಮುಂದೆ ನಿಂತು ಮಾತು ಕೊಂಕಣ ಸುತ್ತದೆ ನೇರಾನೇರ ಎನ್ನುವಂತೆ ಕೇಳಿಯೇ ಕೇಳಿದಾಗ ತಪ್ಪಿತಸ್ಥ ಸ್ಥಾನದಲ್ಲಿ ಅವರಲ್ಲ ನಾವೇ ನಿಲ್ಲಬೇಕಾಯಿತು.

ನಿಮ್ಮ ಪ್ರಶ್ನೆಗಳು ಉಸಿರುಗಟ್ಟಿಸುತ್ತದೆ, ನಿಮ್ಮ ಅನುಮಾನಗಳು ಹಿಂಸೆ, ಇಲ್ಲದನ್ನು ಕಲ್ಪಿಸಿಕೊಂಡಿರಿ ಎಂದು ದಾರಿ ಹಿಡಿದು ಹೊರಟಿದ್ದರು!!

ಕೇಳಲಾಯಿತು, ಅಂಗಲಾಚಲಾಯಿತು, ಕೈಮುಗಿಯಲಾಯಿತು, ಬೇಡಲಾಯಿತು, ತಪ್ಪಿದ್ದರೆ ಕ್ಷಮಿಸು ಎನ್ನಲಾಯಿತು. ಮತ್ತೆ ಮೊದಲಿನ ಹಾಗೆ ಇರಬಹುದೆ ಕೇಳಲಾಯಿತು. ಇಲ್ಲ, ಅಲ್ಲಿ ಅವರಿರಲಿಲ್ಲ. ನಾವು ಕೇಳುವ ಅದೆಷ್ಟೋ ಮೊದಲೆ ಅವರು ಪಥ ಬದಲಿಸಿದ್ದರು. ಇವರೇಕೊ ಬದಲಾಗಿದ್ದಾರೆ ಅಂದುಕೊಳ್ಳುವಷ್ಟರಲ್ಲಿ ಅವರು ಬದಲಾಗಿ ಕಾಲಗಳೇ ಕಳೆದಿದ್ದವು. 

ಇನ್ನೀ ಬದುಕನ್ನು ಮತ್ತೆ ಮೊದಲಿನ ಹಾಗೆ ಆಗಿಸುವುದೂ ಸಾಧ್ಯವಿಲ್ಲವೇನೋ ಅನ್ನಿಸತೊಡಗುತ್ತದೆ. ಆ ದಾರಿ, ದೇವಸ್ಥಾನ, ಈ ಬೆಟ್ಟ, ಅಗೊ ಆ ಬೀದಿ, ಈ ಹಾಡಿನ ಸಾಲು ಎಲ್ಲವೂ ಅವರ ನೆನಪಿನ ಜೊತೆ ತಳಕು ಹಾಕಿಕೊಂಡಿದೆ. ಅದನ್ನೆಂತು ಬದಲಿಸುವುದು. ಉಸಿರಾಡಲು ಸಂಕಟವಾಗುವಷ್ಟು ನೋವಿಟ್ಟು ಹೋದರೆ? ಇಷ್ಟು ಪ್ರೀತಿ ಕೊಟ್ಟದಕ್ಕೆ ಇಷ್ಟು ನೋವು ಕೊಟ್ಟರೆ? ನಾವಿಲ್ಲಿ ಅನುಭವಿಸುವ ಸಂಕಟದ ಪರಿವೆಯೂ ಇಲ್ಲದಂತೆ ನಡೆದದ್ದಾದರೂ ಹೇಗೆ? ಇಷ್ಟೇನಾ ಅವರ ಪ್ರೀತಿಯ ರೀತಿ?!!

ಸೂರ್ಯಪ್ರಭೆಗೆ ಮಂಕು ಕವಿಯಿತೆ? ಬದುಕಿನ ಬೆಳಕೆಲ್ಲಾ ಕಳೆದು ಕತ್ತಲಡರಿದ ಹಾಗೆ. ಒಂಟಿ ಬದುಕಿಗೆ ಹೀಗೆ ಬಂದು ಹಾಗೆ ಹೋದವರು ಬದುಕಲ್ಲಿ ಒಂಟಿಯಾಗಿ ಬದುಕುವುದನ್ನೇ ಮರೆಸಿಬಿಟ್ಟು ಹೋದಂತೆ. ಹೊಸ ಹೂವಿನ ಬಣ್ಣ ಮಾಸಿದ ಹಾಗೆ, ಹೊಸ ಸಂಗೀತದ ಹಕ್ಕಿಯ ದನಿ ಕಟ್ಟಿದ ಹಾಗೆ, ಅವರ ಹೆಸರು ಬರೆದ ಹಾಳೆ ಅಲ್ಲೇ ಉಳಿದ ಹಾಗೆ. 
ಈಗ ಕತ್ತಲಾದ ಬದುಕಿಗೆ ಮತ್ತೆ ಅವರ ಕಿಟಕಿ ಗಾತ್ರದ ಬೆಳಕಿಗೆ ಕಾಯುವುದಷ್ಟೇ ಉಳಿದು ಹೋಯಿತು. 
ಹೋಗುವ ಮುನ್ನ ಒಮ್ಮೆಯಾದರೂ ಕಾರಣ ಹೇಳಬಹುದಿತ್ತು, ಪ್ರೀತಿಯಿಂದ ನಾನೇ ಕಳುಹಿಸುತ್ತಿದ್ದೆ. ಹೇಳದೆ ಹೋಗುವುದು ಸಂಕಟ ತರುತ್ತದೆ. ಏಕೆಂದರೆ,  ಹೇಳದೆ ಹೋಗಿ ಬಿಡುವ ನೋವು ಸದಾ ಕಾಲಕ್ಕೂ ಉಳಿದು ಬಿಡುವ ಈತಿಬಾಧೆ. 

#ನಕ್ಷತ್ರಮೌನಿ

Saturday, 9 September 2023

ಕಳೆದು ಹೋದ ಬಾನಿನಲ್ಲಿ ನಕ್ಷತ್ರವಾದವರು!

ನಾನು ನನ್ನ ಹೆತ್ತವರ ಬಗ್ಗೆ ಹೇಳಿಕೊಂಡದ್ದೇ ಕಡಿಮೆ. ಹೇಳಿಕೊಳ್ಳುವುದಾದರೂ ಏನಿದೆ, ಎಲ್ಲರಿಗೂ ಅವರವರ ತಂದೆ ತಾಯಿ ಪೂಜ್ಯರೇ. ಆದರೂ ಅವರ ಒಂದಷ್ಟು ನೆನಪುಗಳು ಇಂದು ಬಟಾಬಯಲಲ್ಲಿ ಹೆಮ್ಮರವಾಗಿ ಹೂ ಬಿಟ್ಟು  ಧ್ಯಾನಸ್ಥವಾಗಿದೆ. 
ಅಮ್ಮನದ್ದು ಬೆರಗು ಕಣ್ಣು. ಅವಳ ಹಣೆಯ ಇಷ್ಟಗಲದ ಕುಂಕುಮವೇ ಸಾಕು ಅವಳ ಚೆಂದಕ್ಕೆ. ಮನೆಯ ಹಿತ್ತಲಲ್ಲಿ ಅವಳೇ ಬೆಳೆದ ಸಣ್ಣದೊಂದು ಕೈ ತೋಟವಿತ್ತು. ತೊಂಡೆ, ಬಸಳೆ, ಹರಿವೆ, ಕರಿಬೇವು ಅವಳ ಆ ಕುಪ್ಪಿ ಬಳೆಯ ನಾದಕ್ಕೆ ಚಿಗುರೊಡೆಯುತ್ತದೆಯೊ ಅನ್ನಿಸುವಂತೆ ಸೊಂಪಾಗಿ ಬೆಳೆಯುತ್ತಿತ್ತು. ದಸವಾಳವೆಂದರೆ ಅವಳಿಗದೊಂದು ಪ್ರೀತಿ. ಬಣ್ಣ ಬಣ್ಣದ ದಾಸವಳದ ಒಂದು ತುಂಡು ಕೋಲು ತಂದು ಊರಿಟ್ಟು ಬಿಡುತ್ತಿದ್ದಳು. ಆದರೆ ಅದೊಂದು ದೊಡ್ಡ ದಾಸವಾಳದ ಮರದಲ್ಲಿ ಮಾತ್ರ ಕೆಂಪು ಹೂವಿನ ಜಾತ್ರೆ ದಿನ ದಿನವೂ ಇರುತ್ತಿತ್ತು. ಅಪ್ಪನ ದೇವರ ಪೂಜೆಗೆ ಅದೇ ಮರದ ಹೂ ಯಥೇಚ್ಛ. ಅಪ್ಪನ ನಗುವಾದರೂ ದಾಸವಾಳದ ಹೂವಿನಷ್ಟು ಧಾರಾಳವಲ್ಲ. ನಕ್ಕರೆ ಮಾತ್ರ ಮರ ತುಂಬಿದ ಸಂಪಿಗೆ!
ಮುಂಜಾವಿಗೆ ಆಕೆ ಕಾಣಸಿಗುತ್ತಿದ್ದದ್ದೇ ಸ್ಟೌವ್ ಮುಂದೆ ನೀರು ದೋಸೆ ಎರೆಯುತ್ತಾ, ಅವಳ ಮರೆಗೆ ಪುಸ್ತಕ ಹಿಡಿದು ಕೂತ ನನಗೆ ಆಕೆ ದೋಸೆ ಹೋಯ್ಯವುದೇ ಬೆರಗು. ಅದನ್ನು ನೋಡುತ್ತಲೇ ಪುಸ್ತಕ ಮರೆತ್ತದಿದೆ. ಆಕೆ ಬೀಡಿ ಕಟ್ಟುತ್ತಿದ್ದರೆ ನಾನವಳ ಜಡೆ ಹೆಣೆಯುತ್ತಿದ್ದೆ.
ಬೀಡಿಯನ್ನೆಲ್ಲಾ ಚೀಲದಲ್ಲಿ ತುಂಬಿ ಕೊಟ್ಟರೆ ನನ್ನದೊಂದು ಸೈಕಲಿನಲ್ಲಿ ಅದನ್ನು ಕಂಪೆನಿಗೆ ತಲುಪಿಸುವ ಜವಾಬ್ದಾರಿ ಮಾತ್ರ ನನ್ನ ಮೇಲಿರುತ್ತಿತ್ತು. ಅಡುಗೆಮನೆಯ ಎಲ್ಲಾ ಪಾತ್ರೆಗಳಿಗೂ ಅಧಿಕೃತ ಪರಿಚಯ ಅವಳದ್ದು ಮಾತ್ರ. ಅದು ಅವಳ ಕರ್ಮ ಭೂಮಿ. ಅವಳ ಆಣತಿಯಂತೆ ಅಲ್ಲಿ ಎಲ್ಲವೂ ಕುದಿಯುವುದು, ಬೇಯುವುದು. ಕುಕ್ಕರಿಗೂ ಇಂತಿಷ್ಟೇ ಕೂಗು ಹಾಕುವ ಜವಾಬ್ದಾರಿ ಇತ್ತು. ಅದು ಮಿತಿಮೀರುವ ಮುನ್ನವೇ ಅದರ ಆಟ ನಿಲ್ಲಿಸುತ್ತಿದ್ದಳು. ಕೆಲವೊಮ್ಮೆ ಆ ಕೆಲಸ ನನಗೂ ದಯಪಾಲಿಸುತ್ತಿದ್ದಳು. ಆಗೆಲ್ಲಾ ಕಿವಿಯಾಗಿ ಕಣ್ಣಾಗಿ ಕಾಯಬೇಕಿತ್ತು. ಶಾಲೆಯ ಗಣಿತ ತಪ್ಪದ ಹಾಗೆ ಪ್ರತಿ ವಿಸಿಲ್ಲಿಗೂ ಕೈಬೆರಳ ಲೆಕ್ಕ ಹಾಕುತ್ತಾ ಅವಳ ಆದೇಶದ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ತೆಗೆದುಕೊಳ್ಳಬೇಕಿತ್ತು. ಹಾಲಿಗಾದರೂ ಇದೇ ಗತಿ. ಕುದಿ ಬಂದು ಮೇಲೇರಿ ಉಕ್ಕಿ ಚೆಲ್ಲುವ ಸ್ವಾತಂತ್ರ್ಯವನ್ನೇ ಆ ಹಾಲಿನ ಪಾತ್ರೆಗೆ ಕೊಡುತ್ತಿರಲಿಲ್ಲ. ಎಲ್ಲಿಯಾದರೂ ಮೈ ಮರೆತು ಉಕ್ಕಿ ಹೋದರಂತೂ ಒಂದು ರಾಜ್ಯವನ್ನೇ ಸೋತಂತೆ ಹಳಹಳಿಸುತ್ತಿದ್ದಳು. ನನಗೆ ಆ ಜವಾಬ್ದಾರಿಯಂತೂ ಅತಿ ಕಷ್ಟದ್ದೇ ಅಂತ ಅನ್ನಿಸುತ್ತಿತ್ತು. ಪಾತ್ರೆ ನೋಡಿದಷ್ಟೂ ಹೊತ್ತು ಅದು ಕುದಿಯುತ್ತಲೇ ಇರಲಿಲ್ಲ, ಹಾಳಾದ್ದು ಅಂತ ಕಣ್ಣು ಕದಲಿಸಿದ ಕೂಡಲೆ ಉಕ್ಕಿ ಚೆಲ್ಲಿ ಆಗಿರುತ್ತಿತ್ತು!! ಇಂತಹ ಅವಳ ಆ ಅಡುಗೆ ಮನೆಯಲ್ಲಿ ಅವಳೆದರು ದೈನ್ಯದಿಂದ ಬೇಡುತ್ತಿದ್ದದ್ದು ಮಾತ್ರ ಒಂದು ಚಮಚ ಹಾಲಿನ ಹುಡಿಗೆ ಮತ್ತು ಕಾಯಿ ಹೆರೆಯುವಾಗ ಒಂದಿಷ್ಟು ಕಾಯಿ ತುರಿಗೆ!!
ಅವಳ ಅಡುಗೆಗೆ ಇದ್ದ ಘಮವೇ ಬೇರೆ. ಸಾಲಾಗಿ ಮನೆಗಳಿದ್ದರೂ ಶಾಲೆಯಿಂದ ಮಧ್ಯಾಹ್ನದ ಊಟಕ್ಕೆ ಮನೆಗೆ ಬರುವಾಗ ದಾರಿಯಲ್ಲಿ ಒಗ್ಗರಣೆಯ ಪರಿಮಳದಲ್ಲೇ ಅದು ನಮ್ಮ ಮನೆಯದ್ದೆ ಎಂದು ಗುರುತಿಸುವುದು ನನಗಂತೂ ಸಿದ್ಧಿಸಿತ್ತು. ಅವಳು ಮಾಡುತ್ತಿದ್ದ ಮೆಣಸ್ಕಾಯಿ, ತೊಗರಿ ಗಸಿ, ತಾಳ್ಳಾ, ಬೊಂಡಾಸ್ ಸುಕ್ಕ, ಸೋರೆ ಪಾಯಸ ಅವಳಷ್ಟೇ ಮಾಡಬಹುದೇನೊ ಅನ್ನಿಸುತ್ತಿತ್ತು. 
ಕೆಲಸದಿಂದ ಅಪ್ಪ ಬಂದರೆ ಅವನಿಗೆ ಸುಸ್ತೇ ಇರಲಿಲ್ಲವೆ ಎಂದು ಈಗ ನಾನು ಕೆಲಸ ಮುಗಿಸಿ ದಣಿದು ಬರುವಾಗ ಅನ್ನಿಸುತ್ತದೆ. ಅವನ ಮುಖದಲ್ಲಿ ಅದೆಂದೂ ಕಾಣಿಸಲಿಲ್ಲ, ಅಲ್ಲಲ್ಲ ಆತನೆಂದೂ ತೋರಿಸಲಿಲ್ಲ. ಎಲ್ಲರ ಅಪ್ಪಂದಿರಂತೆ ಅವನದು ಶ್ರಮ ಜೀವನ. ದುಡಿದು ದುಡಿದೇ ಬದುಕು ಕಳೆದವನು. ಹಬ್ಬದಲ್ಲೂ, ಸಂಭ್ರಮದಲ್ಲೂ ಅವನಿಗೆ ಪಾಲೇ ಇಲ್ಲದಂತೆ ಇದ್ದು ಬಿಡುತ್ತಿದ್ದ, ಕಷ್ಟದಲ್ಲಿ ಶ್ರಮದಲ್ಲಿ ಎಲ್ಲವೂ ಅವನದಷ್ಟೇ ಎನ್ನುವಂತೆ ಹೊತ್ತುಕೊಳ್ಳುತ್ತಿದ್ದ. ಅವನಿಗಾಗಿ ಏನಿತ್ತು, ಅದೇ ನಾಲ್ಕು ಜೊತೆ ಗೀಟಿನ ಅಂಗಿ ಪ್ಯಾಂಟು ಮತ್ತು ಅವನದೇ ಒಂದು ಸೈಕಲ್ಲು. 
ಆದರೆ, ಅವನ ಜೊತೆ ರಸ್ತೆಯಲ್ಲಿ ನಡೆದು ಹೋಗುವಾಗ ಮಾತ್ರ ಅವನ ಪರಿಚಯದವರು ಒಂದು ಕೈ ಎತ್ತಿ ನಮಸ್ತೆ ಮಾಡುವಾಗ ಮಾತ್ರ ಅಪ್ಪ ತುಂಬಾ ದೊಡ್ಡ ಮನುಷ್ಯ ಇರಬೇಕು ಅನ್ನಿಸುತ್ತಿತ್ತು. ಬಾಲ್ಯವೆಂದರೆ ಹೀಗೆ ಕಟ್ಟಿಕೊಳ್ಳುವುದಲ್ಲವೆ. ಅಪ್ಪನ ಕೈ ಅಡುಗೆಯ ರುಚಿ ಸವಿಯುವುದಕ್ಕೆ ಸಿಗುತ್ತಿದ್ದದ್ದು ಮಾತ್ರ ಒಂದು ಐಟಂ ಮಾತ್ರವೇ ಆಗಿರುತ್ತಿತ್ತು. "ಗೀ ರೈಸ್" ಆತನೇ ಮಾಡಿ ಬಡಿಸುತ್ತಿದ್ದ. ಅದು ಅವನದೇ ಆದ "ಸಿಗ್ನೇಚರ್ ರೆಸಿಪಿ". 
ಅಪ್ಪ ಅಮ್ಮ ಇದ್ಧಾಗ ಬಾಂಧವ್ಯ ಚೆಂದವಿತ್ತು. ಬರುವ ಆತ್ಮೀಯರಿಗೂ ಕಡಿಮೆ ಇರಲಿಲ್ಲ. ಯಾರೇ ಬಂದರೂ ಮನೆ ತುಂಬಾ ಸಂಭ್ರಮ. ಬಗೆ ಬಗೆಯ ಮೀನು ಅಡುಗೆ ಮನೆಗೆ ಪುರುಸೋತ್ತೆ ಕೊಡದಂತೆ ಕುದಿಯುತ್ತಿತ್ತು, ಕಾವಲಿಯಲ್ಲಿ ಹುರಿಯುತ್ತಿತ್ತು! 
ಅವರಿಬ್ಬರದೂ ಒಂದು ಚೆಂದದ ಸಾಂಗತ್ಯವಿತ್ತು. ಅಮ್ಮ ಬೀಡಿ ತಿರುಗಿಸಿ ಕೊಟ್ಟರೆ ಅಪ್ಪ ಅದಕ್ಕೆ ನೂಲು ಸುತ್ತಿ ಕೊಡುತ್ತಿದ್ದ! ಅವರ ಮಾತುಕತೆ, ಗಾಸಿಪ್, ನಿರ್ಣಯಗಳೆಲ್ಲಾ ಆ ಹೊತ್ತೆ ಆಗುತ್ತಿತ್ತು. 

ಜಾತ್ರೆಯಲ್ಲಿ ಕೈ ಬಿಟ್ಟು ತಪ್ಪಿ ಹೋದ ಮಗುವಿನಂತೆ, ಅವರು ದಾರಿ ಮಧ್ಯೆ ಪಥ ಬದಲಿಸಿ ಜೊತೆ ಜೊತೆಯಾಗಿ ಹೊರಟು ಹೋದರು ಬಾರದ ಲೋಕವೊಂದಕ್ಕೆ. ಈಗ ದಾಸವಾಳದ ಮರದಲ್ಲಿ ಹೂವಿಲ್ಲ, ಸಂಪಿಗೆಯ ಮರ ಘಮ್ ಎನ್ನುವುದೂ ಇಲ್ಲ. ಅಡುಗೆ ಮನೆ ಇದೆ ಆದರೆ ಅಲ್ಲಿಯ ಪಾತ್ರೆಗಳೂ ಈಗ ಅವಳನ್ನು ಮರೆತಿದೆ, ಅವು ಯಾವುದಕ್ಕೂ ಈಗ ಆಕೆಯ ಆಣತಿ ಇಲ್ಲ. ಬೇಕಾದಾಗ ಉಕ್ಕುತ್ತವೆ, ಬೇಡವೆಂದಾಗ ಕುಕ್ಕರು ಸೀಟಿ ಹಾಕುತ್ತವೆ. ಏನ್ನಿದ್ದರೂ ಈಗ ಮನೆಗೆ ಸಂಭ್ರಮವಿಲ್ಲ. ಅಡುಗೆ ಮನೆಯಲ್ಲಿ ದಿನ ದಿನವೂ ತರತರದ ಖಾದ್ಯಗಳು ಈಗಲೂ ತಯಾರಾಗುತ್ತದೆ, ಆದರೆ ಅದ್ಯಾವುದಕ್ಕೂ ಅವಳ ಕೈ ಅಡುಗೆಯ ರುಚಿ ಹತ್ತವುದೇ ಇಲ್ಲ. ನಾನಂತೂ ಜೀರಿಗೆ, ಕೊತ್ತಂಬರಿ, ಹುಳಿ ಹೆಚ್ಚು ಕಮ್ಮಿ ಮಾಡಿ ಮಾಡಿಯೇ ಸೋತಿದ್ದೇನೆ. ಅವಳು ಮಾಡುತ್ತಿದ್ದ ಉಪ್ಪಿನಕಾಯಿಯ ರುಚಿಯೂ ನನಗೀಗ ಮರು ತಯಾರಿಸುವುದು ಸಾಧ್ಯವಿಲ್ಲ. ನಾಲಿಗೆ ಮೇಲಿನ ಅವಳ ಅಡುಗೆಯ ರುಚಿಯೂ ಈಗೀಗ ಮರೆತೇ ಹೋಗುತ್ತಿದೆ. ಮತ್ತೆ ಅವರು ಬಂದು ಎಲ್ಲವನ್ನೂ ಮತ್ತೆ ನೆನಪಿಸಿದ್ದರೆ, ಆವಿಯಾದ ನೀರೆ ಮಳೆಯಾಗಿ ಮರಳಿದ ಹಾಗೆ! 

ಅವರು ಬರುವುದಿಲ್ಲ ಎನ್ನುವುದಷ್ಟೇ ಸತ್ಯ, ಏಕೆಂದರೆ ಅವರು ಕಳೆದು ಹೋದ ಬಾನಿನಲ್ಲಿ ನಕ್ಷತ್ರವಾದವರು. 

#ನಕ್ಷತ್ರಮೌನಿ