ಅವರಿಬ್ಬರೂ ಅಮರ ಪ್ರೇಮಿಗಳು ಒಂದಾಗದೆ ಉಳಿದುಬಿಟ್ಟರು, ಪ್ರೇಮಿಸಿದ ಅವರಿಬ್ಬರನ್ನೂ ಶಾಶ್ವತ ವಿರಹ ಕಾಡಿತು, ಮತ್ತೆಂದೂ ಅವರು ಒಂದಾಗಲೇ ಇಲ್ಲ, ಈ ಸಾಲುಗಳನ್ನೆಲ್ಲಾ ಕೇಳಿದಾಗ ಎದೆಯೊಳಗೊಂದು ಸಂಕಟದ ಸೆಳಕು ಮೂಡಿಬಿಡುತ್ತದೆ. ಯಾರಿಗಾಗಿಯೊ ಕಣ್ ತುಂಬಿ ಮಿಡಿಯುತ್ತದೆ. ದೇವರಂತಹ ದೇವರೂ ತಥಾಸ್ತು ಅಂದಿದ್ದರೆ ಪ್ರೇಮ ಫಲಿಸುತ್ತಿತ್ತೇನೊ ಅನ್ನಿಸುತ್ತದೆ. ಆದರೆ, ಪ್ರೇಮ ಎಂದರೆ ಉತ್ಕಟ ಭಾವತೀವ್ರತೆಯಿಂದ ಬಯಸಿದ್ದನ್ನು ಪಡೆಯುವುದಾ? ನನ್ನದು ಅನ್ನುವ ಭಾವದಿಂದ ಅದು ನನ್ನದೇ ಆಗಿ ಉಳಿಯಲಿ ಅನ್ನುವುದಾ? ಇಬ್ಬರೂ ಜೊತೆಯಾಗಿ ಸುಖಾಂತ್ಯ ಕಾಣುವ ಸಂಭ್ರಮವಾ? ಒಂದಾಗದೆ ಉಳಿದು ಹೋಗುವ ಹೂ ಗುಲಾಬಿಯಂತಹ ಚೆಂದ ಚೆಂದದ ಪ್ರೇಮಿಗಳದ್ದು ವಿಫಲ ಪ್ರೇಮವಾ?
ಪ್ರೇಮ ದಕ್ಕಿಸಿಕೊಳ್ಳುವುದಲ್ಲ, ಒದಗಿ ಬರುವುದು. ಒದಗದೆ ಉಳಿದಾಗ ಧಾರಾಳವಾಗಿ ತೊರೆದು ಬರುವುದು. ಪ್ರೇಮ ಎಂದರೆ ಸಿಗದಿರುವ ಕವಿತೆಯ ಸಾಲನ್ನು ಸುಮಧುರವಾಗಿ ಗುನುಗುನಿಸಿ ಎದ್ದು ಬರುವುದು. ಪ್ರೇಮ ಎಂದರೆ ಫಲಿಸದಾಗಲೂ ಅದಕ್ಕೆ ಹೂಮಳೆಯ ಅಕ್ಷತೆ ಹಾಕಿ ಹರಸಿ ಬರುವುದು.
ಪ್ರೇಮವೆಲ್ಲವೂ ಫಲಿಸುವುದಿಲ್ಲ, ಅದೆಷ್ಟೋ ಎದೆಕಾವ್ಯದ ಹಾಡು ಪಯಣದ ನಡುವೆಯೆ ಮರೆಯಾಗುತ್ತದೆ. ಮನೆಯಂಗಳದ ಹೂವೊಂದನ್ನ ಯಾರೊ ಯಾವುದೊ ಹೊತ್ತಲ್ಲಿ ಕೊಯ್ದು ಹೋದಂತೆ, ಜೊತೆ ನಡೆದವರು ಹೇಳದೆ ಕೇಳದೆ ಪಥ ಬದಲಾಯಿಸಿದ ಹಾಗೆ ಖಾಲಿತನವನ್ನು ಬಿಟ್ಟು ತೆರಳುತ್ತಾರೆ. ಪ್ರೇಮಲೋಕದಲ್ಲಿ ಸೂತಕ ಆವರಿಸುತ್ತದೆ.
ಆಗ ಎದ್ದು ಬರಬೇಕು, ಅಮೃತದಂತಹ ಪ್ರೇಮವೇ ಮೈತುಂಬಾ ನಂಜಾಗಿ ಹಿಂಡಿ ಹಿಪ್ಪೆ ಮಾಡುವ ಹೊತ್ತಿಗೆ, ಎದೆಯಲ್ಲೊಂದು ಶೋಕ ಪುಷ್ಪವಿಟ್ಟು ವಿವೇಕದ ಮಾತನ್ನಾಲಿಸಿ ಎದ್ದು ಬರಬೇಕು. ಮುಖದಲ್ಲೊಂದು ಹುಸಿ ನಗೆಯೇ ಸರಿ ಆದರೆ ಎದೆಯೊಳಗೊಂದು ಭರವಸೆಯ ದೀಪ ಹಚ್ಚಿ ದಾರಿ ಸವೆಸಬೇಕು.
ತ್ಯಾಗ ಪ್ರೀತಿಯ ಅತ್ಯುನ್ನತ ಪೂಜೆ! ಕಟುವಾಗಿ ಮಾತನಾಡುವುದಲ್ಲ, ದೂರುವುದಲ್ಲ, ನೋವಿನ ಮೊನಚು ಮಾತನ್ನೆಸೆಯುವುದಲ್ಲ, ಹೆದರಿಸುವುದಲ್ಲ, ಬೆದರಿಸುವುದಲ್ಲ, ಎಳೆದಾಡುವುದು, ಅವಮಾನಿಸುವುದು, ಘನತೆರಹಿತವಾಗಿ ವರ್ತಿಸುವುದೂ ಅಲ್ಲ. ತ್ಯಾಗ ಮಾಡಿ ಎದ್ದು ಬರುವುದು.
ಬದುಕಿನಲಿ ಸಂಧಿಸುವುದು ಎಷ್ಟು ಸತ್ಯವೊ ಅಗಲಿ ದೂರವಾಗುವುದು ಅಷ್ಟೇ ಸತ್ಯ ಅದನ್ನು ಒಪ್ಪಿಕೊಳ್ಳದೆ ಬೇರೆ ನಿರ್ವಾಹವಿಲ್ಲ. ದಕ್ಕದ ಪ್ರೇಮವನ್ನು ತ್ಯಾಗ ಮಾಡುವ ಗುಣ ದೊಡ್ಡದು. ಪ್ರೀತಿಸಿದವರು ನಮ್ಮವರಾಗಲಿಲ್ಲ ಎನ್ನುವ ದುಃಖಕ್ಕಿಂತ ನಾವು ಪ್ರೀತಿಸಿದವರ ಬಾಳು ಬಂಗಾರವಾಗಲಿ ಎಂದು ಆಶಿಸುವುದು ಪ್ರಬುದ್ಧತೆ ಅಲ್ಲವಾ? ಅದಲ್ಲವೆ ನಮ್ಮ ಪ್ರೀತಿಯ ರೀತಿ?
ಬದುಕು ಬಂಗಾರವಾಗುವುದು ಬಲಾಢ್ಯತೆಯಲ್ಲಿ ಅಲ್ಲ ಗಟ್ಟಿತನದಲ್ಲಿ, ಗೆಲ್ಲುವುದರಲ್ಲಿ ಅಲ್ಲ ಸೋತು ಗೆಲ್ಲುವುದರಲ್ಲಿ. ಕೆ ಎಸ್ ನರಸಿಂಹಸ್ವಾಮಿ ಅವರ ದಕ್ಕದ ನೀಲಾಳಿಗಾಗಿ ಅವಳ ಪ್ರಿಯತಮ ಹೇಳುವುದನ್ನು ಅದೆಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ಗೊತ್ತಾ, "ನೀಲಾಳಿಗೆ ನನ್ನ ಕನಸೂ ಸಹ ಬೀಳುವುದು ಬೇಡ, ಹಾಲುಂಡು ಹೂ ಮುಡಿದು, ಸುಖವಾಗಿರಲಿ"
ಇದಾಗ ಬೇಕು ನಮ್ಮ ಪ್ರೀತಿಯ ನೀತಿ.
ಮಿಂಚೊ, ಗುಡುಗೊ, ಕತ್ತಲೊ, ಮಳೆಯೊ, ಬಿರುಗಾಳಿಯೊ, ಅಲೆಯೊ, ಹೆದ್ದೆರೆಗಳೊ ನಮ್ಮ ಬದುಕಿನ ನಾವೆ ಮಾತ್ರ ದಿಕ್ಕೆಡದೆ ಶಾಂತವಾಗಿ ದಡ ಸೇರಲಿ.
#ನಕ್ಷತ್ರಮೌನಿ