ಯಾರೂ ಬೇಕಾಗಿಲ್ಲ ಎನ್ನುವ ನಿರ್ಲಿಪ್ತ, ನಿಶಾಂತ ಆಪ್ಯಾಯಮಾನ ನಸುಗತ್ತಲ ಬದುಕಿಗೆ ಕಿಟಕಿಯೊಳಗೆ ಇಣುಕುವ ಬೆಳ್ಳನೆ ಬೆಳಕಿನ ಹಾಗೆ ಅದ್ಯಾರೊ ಅದೆಲ್ಲಿಂದಲೋ ಗೊತ್ತು ಗುರಿಯಿಲ್ಲದೆ ಬಂದು ಬಿಡುತ್ತಾರೆ. ಯಾಕೆ ಬಂದರೊ, ಇವರೇಕೆ ಹೀಗೆ ಹಿಂದೆ ಬೀಳುತ್ತಿದ್ದಾರೆ, ಇವರಿಗೆ ಈ ಲೋಕದಲ್ಲಿ ಬೇರೆ ಯಾರೂ ಇಲ್ಲವಾ ಎಂದೆಲ್ಲಾ ಯೋಚಿಸುವಷ್ಟರಲ್ಲಿ ಅವರ ಕಾಳಜಿ, ಮಾತು, ನಗು ಇಷ್ಟವಾಗತೊಡಗುತ್ತದೆ. ಹೊರಗೆ ನೋಡಿದರೆ ಎಂದಿನ ತೋಟದಲಿ ಹೊಸ ಬಣ್ಣದ ಹೂವು, ಅದೇ ಮರದಲ್ಲಿ ಹಾಡುವ ಅದೇ ಹಕ್ಕಿಯ ದನಿಯಲ್ಲಿ ಹೊಸ ಸಂಗೀತ, ಟೇಬಲಿನಲ್ಲಿನ ಪುಸ್ತಕದಲ್ಲಿ ಪೆನ್ನು ಅರಿವಿಲ್ಲದೆ ಅವರ ಹೆಸರು ಬರೆಯತೊಡಗಿದೆ!
ಬೆಳಗಿನಿಂದ ರಾತ್ರಿಯವರೆಗೆ ಮೊಬೈಲಿನ ತುಂಬಾ ಅವರದೇ ಆದ ಧಾಟಿಯಲ್ಲಿ ಮೆಸೆಜುಗಳ ಮಾತುಕತೆ. ಆ ಧಾಟಿಗೆ, ಅದನ್ನು ಓದುವ ಓಘಕ್ಕೆ ಮನಸ್ಸು ಒಗ್ಗಿಕೊಳ್ಳತೊಡಗುತ್ತದೆ. ಓದುವಾಗೆಲ್ಲಾ ಅವರದೇ ದನಿ ಮತ್ತು ಶೈಲಿಯಲ್ಲೇ ಓದ ತೊಡಗುತ್ತದೆ ಮನಸ್ಸು! ಆಹಾ!! ಇದೇನು, ಹೀಗೇಕೆ ಎಂದೆಲ್ಲಾ ತಿಳಿಯುವಷ್ಟರಲ್ಲಿ ಅವರ ಭೇಟಿ ಸುಖಾಸುಮ್ಮನೆ ಖುಷಿ ಕೊಡತೊಗುತ್ತದೆ. ಒಂದು ಲಾಂಗ್ ರೈಡ್, ಅದ್ಯಾವುದೋ ದೇವಸ್ಥಾನದ ಕಟ್ಟೆ, ಇನ್ನೆಲ್ಲಿಯದೊ ಸಂಜೆ ಕರಗುವ ಬೆಟ್ಟ, ಬೆಳದಿಂಗಳ ಹಾಲು ಬೆಳಕಿನ ಹೊಳೆ ಎಲ್ಲವೂ ಇವರಿಂದಲೇ ಇಷ್ಟು ಸೊಗಸೊ ಅಥವಾ ಸೊಗಸಿರುವ ಜಾಗೆಗಳಿಗೆ ನಾವು ಜೊತೆಯಾಗಿ ಬಂದೆವೊ ತಿಳಿಯದಾಗುತ್ತದೆ.
ದಿನ ಶುರುವಾಗುವುದು ಅದೇ ಮೆಸೆಜಿನಿಂದ, ಒಂದು ಇಮೋಜಿಗೆ ಇಡೀ ದಿನದ ಉಲ್ಲಾಸ ಮೂಡಿಸುವ ತಾಕತ್ತು ಇದೆ ಎಂದು ಅವರ ಮೆಸೆಜಿನಿಂದಲೇ ತಿಳಿದಿದ್ದು. ಕನಸುಗಳು ಯಾಕೊ ಈಗ ಅವರ ಸುತ್ತವೇ ಮೊಳೆಯ ತೊಡಗಿದೆ ಅನ್ನಿಸುತ್ತದೆ. ಬದುಕಿನ ಮುಂದಿನ ಪಯಣಕ್ಕೆ ಯಾರೊ ಜೊತೆಗಿರುವಂತೆ, ಇನ್ನೇನಿದ್ದರೂ ಅವರನ್ನು ಹೊರತುಪಡಿಸಿ ಯಾವುದನ್ನೂ ನಿರ್ಣಯಿಸಲಾರೆ ಎನ್ನುವಂತೆ.
ಪ್ರೀತಿ ಎಂದರೆ ಹಬ್ಬ! ಪ್ರೀತಿ ಎಂದರೆ ಸಂಭ್ರಮ!! ಪ್ರೀತಿ ಎಂದರೆ ನೀನು!!!
ಹೀಗೆ ಕಳುಹಿಸಿದರೆ ಅಲ್ಲೆಲ್ಲೊ ಜಾತ್ರೆಯಂತಹ ಸಂಭ್ರಮ! ಅವರು ಹಾಗೆ ಕಳಿಸಿದ್ದಾದರೆ ಎದೆಯೊಳಗೆ ನದಿ ಹರಿದಂತೆ. ಗುಪ್ತಗಾಮಿನಿ!!
ಕಿಟಕಿಯಿಂದ ಇಣುಕಿದ ಬೆಳಕಷ್ಟೇ ಅಲ್ಲ ಇದು, ಬದುಕಿನ ಪೂರ್ತಿ ಹಬ್ಬಿಕೊಂಡ ಸೂರ್ಯಪ್ರಭೆ. ಇನ್ನು ಈ ಬಾಳಲಿ ಸದಾ ಹೊಂಬೆಳಕಿನದ್ದೇ ಫಳ ಫಳಿಸುವ ಬೆಳಕಿರಲಿದೆ ಎಂದು ಮನಸ್ಸು ಒಪ್ಪ ತೊಡಗುತ್ತದೆ. ಹೌದಾ? ನಿಜವೇ? ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿದರೂ ಹೌದೂ ಇದಿನ್ನು ಶಾಶ್ವತ ಪ್ರೀತಿ ಎನ್ನಲು ಸಾವಿರ ಕಾರಣಗಳಿರುತ್ತದೆ. ಅವರು ಕಳುಹಿಸಿದ ಹೂನಗೆಯ ಇಮೋಜಿಯಿಂದ ಹಿಡಿದು ದೇವಸ್ಥಾನದಲ್ಲಿ ಹಣೆಗೆ ಹಚ್ಚಿದ ಪ್ರಸಾದದ ತನಕ ಸಾವಿರ ಸಾಕ್ಷಿ ಕೊಡಬಲ್ಲೆ ಎನ್ನುತ್ತದೆ ಪ್ರಶ್ನೆ ಕೇಳಿದ ಅದೇ ಮನಸ್ಸು!!
ಆದರೆ, ಆದರೆ ಈಗೇಕೊ ಮೊದಲಿನಂತಿಲ್ಲ,
ಪ್ರೀತಿ ಎಂದರೆ ಹಬ್ಬ! ಪ್ರೀತಿ ಎಂದರೆ ಸಂಭ್ರಮ!! ಪ್ರೀತಿ ಎಂದರೆ ನೀನು!!!
ಸಾವಿರ ಸಲಿ ಹೇಳಿದ ಇದೇ ಸಾಲುಗಳನ್ನು ಈಗ ಕಳುಹಿಸಿದರೆ ಯಾಕೊ ಮೊದಲಿನ ಭಾವತೀವ್ರತೆ ಕಾಣಿಸಿದಂತೆ ಇಲ್ಲ. ಯಾಕೆ ಹೀಗೆ? ಕೇಳಲಾಗದು, ಕೇಳಿದರೆ ತಪ್ಪಾದೀತಾ??
ಮೆಸೆಜು ಕಳುಹಿಸಿ ಅರ್ಧಗಂಟೆ ಮರುತ್ತರಕ್ಕೆ! ಯಾವುದೊ ಒತ್ತಡ, ಬ್ಯುಸಿ ಇದ್ದೆ ಅನ್ನುವ ಒಂದು ಢಾಳಾದ ಸಂದೇಶ. ಕೈಯಲ್ಲೆ ಮೊಬೈಲ್ ಇತ್ತಲ್ಲವೆ?
ಯಾಕೆ ಹೀಗೆ? ಕೇಳಲಾಗದು, ಕೇಳಿದರೆ ತಪ್ಪಾದೀತಾ??
ಸಿಗಬಹುದೆ?
"ಇಲ್ಲ, ಈ ವಾರ ಆಗುವುದಿಲ್ಲ".
ಫೋನಿಗೆ ಸಿಗಲೊಲ್ಲರು, ಮೆಸೆಜುಗಳಲ್ಲಿ ಜೀವಂತಿಕೆ ಇಲ್ಲ, ಇರುವ ಶಬ್ಧಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು.
ಎದೆಯೊಳಗೆ ಇದೇನೊ ನೋವಿನ ಸೆಳಕಿದೆ. ಹೇಳಿಕೊಂಡರೆ, "ಹಾಗೇನಿಲ್ಲ ನೀನು ಯಾಕೊ ಈಗೀಗ ಸುಮ್ಮನೆ ಒದ್ದಾಡುತ್ತೀಯಾ ಅನ್ನುವ ಹಾರಿಕೆಯ ಉತ್ತರ".
ಹಾ! ಆದೊಂದು ದಿನ ಇನ್ನು ಸಹಿಸಲಾಗದು ಎಂದು ಎದ್ದೋಡಿ ಅವರ ಮುಂದೆ ನಿಂತು ಮಾತು ಕೊಂಕಣ ಸುತ್ತದೆ ನೇರಾನೇರ ಎನ್ನುವಂತೆ ಕೇಳಿಯೇ ಕೇಳಿದಾಗ ತಪ್ಪಿತಸ್ಥ ಸ್ಥಾನದಲ್ಲಿ ಅವರಲ್ಲ ನಾವೇ ನಿಲ್ಲಬೇಕಾಯಿತು.
ನಿಮ್ಮ ಪ್ರಶ್ನೆಗಳು ಉಸಿರುಗಟ್ಟಿಸುತ್ತದೆ, ನಿಮ್ಮ ಅನುಮಾನಗಳು ಹಿಂಸೆ, ಇಲ್ಲದನ್ನು ಕಲ್ಪಿಸಿಕೊಂಡಿರಿ ಎಂದು ದಾರಿ ಹಿಡಿದು ಹೊರಟಿದ್ದರು!!
ಕೇಳಲಾಯಿತು, ಅಂಗಲಾಚಲಾಯಿತು, ಕೈಮುಗಿಯಲಾಯಿತು, ಬೇಡಲಾಯಿತು, ತಪ್ಪಿದ್ದರೆ ಕ್ಷಮಿಸು ಎನ್ನಲಾಯಿತು. ಮತ್ತೆ ಮೊದಲಿನ ಹಾಗೆ ಇರಬಹುದೆ ಕೇಳಲಾಯಿತು. ಇಲ್ಲ, ಅಲ್ಲಿ ಅವರಿರಲಿಲ್ಲ. ನಾವು ಕೇಳುವ ಅದೆಷ್ಟೋ ಮೊದಲೆ ಅವರು ಪಥ ಬದಲಿಸಿದ್ದರು. ಇವರೇಕೊ ಬದಲಾಗಿದ್ದಾರೆ ಅಂದುಕೊಳ್ಳುವಷ್ಟರಲ್ಲಿ ಅವರು ಬದಲಾಗಿ ಕಾಲಗಳೇ ಕಳೆದಿದ್ದವು.
ಇನ್ನೀ ಬದುಕನ್ನು ಮತ್ತೆ ಮೊದಲಿನ ಹಾಗೆ ಆಗಿಸುವುದೂ ಸಾಧ್ಯವಿಲ್ಲವೇನೋ ಅನ್ನಿಸತೊಡಗುತ್ತದೆ. ಆ ದಾರಿ, ದೇವಸ್ಥಾನ, ಈ ಬೆಟ್ಟ, ಅಗೊ ಆ ಬೀದಿ, ಈ ಹಾಡಿನ ಸಾಲು ಎಲ್ಲವೂ ಅವರ ನೆನಪಿನ ಜೊತೆ ತಳಕು ಹಾಕಿಕೊಂಡಿದೆ. ಅದನ್ನೆಂತು ಬದಲಿಸುವುದು. ಉಸಿರಾಡಲು ಸಂಕಟವಾಗುವಷ್ಟು ನೋವಿಟ್ಟು ಹೋದರೆ? ಇಷ್ಟು ಪ್ರೀತಿ ಕೊಟ್ಟದಕ್ಕೆ ಇಷ್ಟು ನೋವು ಕೊಟ್ಟರೆ? ನಾವಿಲ್ಲಿ ಅನುಭವಿಸುವ ಸಂಕಟದ ಪರಿವೆಯೂ ಇಲ್ಲದಂತೆ ನಡೆದದ್ದಾದರೂ ಹೇಗೆ? ಇಷ್ಟೇನಾ ಅವರ ಪ್ರೀತಿಯ ರೀತಿ?!!
ಸೂರ್ಯಪ್ರಭೆಗೆ ಮಂಕು ಕವಿಯಿತೆ? ಬದುಕಿನ ಬೆಳಕೆಲ್ಲಾ ಕಳೆದು ಕತ್ತಲಡರಿದ ಹಾಗೆ. ಒಂಟಿ ಬದುಕಿಗೆ ಹೀಗೆ ಬಂದು ಹಾಗೆ ಹೋದವರು ಬದುಕಲ್ಲಿ ಒಂಟಿಯಾಗಿ ಬದುಕುವುದನ್ನೇ ಮರೆಸಿಬಿಟ್ಟು ಹೋದಂತೆ. ಹೊಸ ಹೂವಿನ ಬಣ್ಣ ಮಾಸಿದ ಹಾಗೆ, ಹೊಸ ಸಂಗೀತದ ಹಕ್ಕಿಯ ದನಿ ಕಟ್ಟಿದ ಹಾಗೆ, ಅವರ ಹೆಸರು ಬರೆದ ಹಾಳೆ ಅಲ್ಲೇ ಉಳಿದ ಹಾಗೆ.
ಈಗ ಕತ್ತಲಾದ ಬದುಕಿಗೆ ಮತ್ತೆ ಅವರ ಕಿಟಕಿ ಗಾತ್ರದ ಬೆಳಕಿಗೆ ಕಾಯುವುದಷ್ಟೇ ಉಳಿದು ಹೋಯಿತು.
ಹೋಗುವ ಮುನ್ನ ಒಮ್ಮೆಯಾದರೂ ಕಾರಣ ಹೇಳಬಹುದಿತ್ತು, ಪ್ರೀತಿಯಿಂದ ನಾನೇ ಕಳುಹಿಸುತ್ತಿದ್ದೆ. ಹೇಳದೆ ಹೋಗುವುದು ಸಂಕಟ ತರುತ್ತದೆ. ಏಕೆಂದರೆ, ಹೇಳದೆ ಹೋಗಿ ಬಿಡುವ ನೋವು ಸದಾ ಕಾಲಕ್ಕೂ ಉಳಿದು ಬಿಡುವ ಈತಿಬಾಧೆ.
#ನಕ್ಷತ್ರಮೌನಿ
No comments:
Post a Comment
Note: only a member of this blog may post a comment.